ಅ.9: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ 14 ಕೋಟಿ ರೂ.ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ
ಉಡುಪಿ, ಅ.7: ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯಿಂದ ಕಾರ್ಖಾನೆಯ ಗುಜರಿ ಮಾರಾ ಟದ ಹೆಸರಿನಲ್ಲಿ ನಡೆದಿರುವ 14 ಕೋಟಿ ರೂ.ಗಳಿಗೂ ಅಧಿಕ ಭ್ರಷ್ಟಾಚಾರ ಹಾಗೂ ಅವ್ಯವಹಾರದ ಕುರಿತಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸರಕಾರವನ್ನು ಒತ್ತಾಯಿಸಿ ಅ.9ರ ಸೋಮವಾರ ಬ್ರಹ್ಮಾವರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ಪ್ರಸಾದ್‌ರಾಜ್ ಕಾಂಚನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಕರೆಯಲಾದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲಾ ರೈತ ಸಂಘದ ಜೊತೆಗೂಡಿ ಜಿಲ್ಲಾ ಕಾಂಗ್ರೆಸ್, ಉಡುಪಿ ಬ್ಲಾಕ್ ಕಾಂಗ್ರೆಸ್ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಗಳ ಸಹಕಾರದೊಂದಿಗೆ ಈ ಬೃಹತ್ ಪ್ರತಿಭಟನಾ ಜಾಥ ಹಾಗೂ ಬಹಿರಂಗ ಸಭೆ ನಡೆಯಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಎದುರಿನಿಂದ ಪ್ರತಿಭಟನಾ ಮೆರವಣಿಗೆ ಬ್ರಹ್ಮಾವರ ಬಸ್ ನಿಲ್ದಾಣದವರೆಗೆ ಸಾಗಲಿದ್ದು, ಅಲ್ಲಿ ಬಹಿರಂಗ ಸಭೆ ನಡೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಹಾಗೂ ಕಾರ್ಖಾನೆ ಮತ್ತು ಸರಕಾರಕ್ಕೆ ಆದ ನಷ್ಟವನ್ನು ತಪ್ಪಿತಸ್ಥರಿಂದಲೇ ವಸೂಲಿ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ ಸೇರಿ ದಂತೆ ಜಿಲ್ಲಾ ಮಟ್ಟದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ರೈತರು, ಕಾರ್ಖಾನೆಯ ಸರ್ವಸದಸ್ಯರು ಪಾಲ್ಗೊಳ್ಳುವಂತೆ ವಿನಂತಿಸಲಾಗುವುದು ಎಂದರು.
2021ರ ಡಿ.21ರಂದು ಕೇವಲ 41 ಮಂದಿ ಸದಸ್ಯರಿಂದ ಅವಿರೋಧವಾಗಿ ಆಯ್ಕೆಯಾದ 10 ಮಂದಿ ಸದಸ್ಯರ ಆಡಳಿತ ಮಂಡಳಿ ನೀಡಿದ ಭರವಸೆಯನ್ನು ಮರೆತು ಕಾರ್ಖಾನೆಯ ಎಲ್ಲಾ ಗುಜರಿಯೊಂದಿಗೆ ತಳಪಾಯದ ಕಲ್ಲನ್ನೂ ಬಿಡದೇ ಮಾರಾಟ ಮಾಡಿದೆ ಎಂದು ಕಾರ್ಖಾನೆಯ ಮಾಜಿ ನಿರ್ದೇಶಕರಲ್ಲೊಬ್ಬರಾದ ಕಿಷನ್‌ಹೆಗ್ಡೆ ಕೊಳ್ಕೆಬೈಲ್ ತಿಳಿಸಿದರು.
ಆ ಆಡಳಿತ ಮಂಡಳಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಸ್ವೇಚ್ಛಾಚಾರದಿಂದ ವರ್ತಿಸಿ ಯಾವುದೇ ಇಲಾಖೆಗಳ ಅನುಮತಿ ಪಡೆಯದೇ, ತನ್ನದೇ ಆದ ತಾಂತ್ರಿಕ ಸಮಿತಿಯನ್ನು ರಚಿಸಿಕೊಂಡು ಟೆಂಡರ್‌ನ ನಿಬಂಧನೆಗಳನ್ನೆಲ್ಲಾ ಉಲ್ಲಂಘಿಸಿ ಪೂರ್ವಯೋಜಿತ ರೀತಿಯಲ್ಲಿ ಗುತ್ತಿಗೆ ಪಡೆದ ನ್ಯೂರಾಯಲ್ ಟ್ರೇಡರ್ಸ್‌ಗೆ ಅನುಕೂಲವಾಗುವಂತೆ, ಸಕ್ಕರೆ ಕಾರ್ಖಾನೆಗೆ ಕೋಟ್ಯಾಂತರ ರೂ.ನಷ್ಟವಾಗುವಂತೆ ಗುಜರಿಯನ್ನು ವಿಲೇವಾರಿ ಮಾಡುವಲ್ಲಿ ಮುತುವರ್ಜಿ ತೋರಿಸಿರು ವುದು ಸಭಾ ನಡವಳಿ ನೋಡಿದಾಗ ಗೊತ್ತಾಗುತ್ತದೆ ಎಂದರು.
ಗುತ್ತಿಗೆ ಪಡೆದ ಗುತ್ತಿಗೆದಾರರು ಗುಜರಿ ಎತ್ತುವಳಿಗೆ ಮುನ್ನ ಐದು ಕೋಟಿ ರೂ. ಗ್ಯಾರಂಟಿಯನ್ನು ರಾಷ್ಟ್ರೀಕೃತ ಬ್ಯಾಂಕಿ ನಿಂದ ಪಡೆದು ಕಾರ್ಖಾನೆಗೆ ಸಲ್ಲಿಸಬೇಕಿತ್ತು. ಆದರೆ ಟೆಂಡರ್ ನಿಬಂಧನೆಗೆ ವಿರುದ್ಧವಾಗಿ ಆಡಳಿತ ಮಂಡಳಿ ಐದು ಕೋಟಿ ರೂ.ಗ್ಯಾರಂಟಿಯನ್ನು ಕೈಬಿಟ್ಟು ಕಾರ್ಖಾನೆಗೆ ವಂಚನೆ ಎಸಗಿದೆ ಎಂದವರು ಆರೋಪಿಸಿದರು.
ಇದರೊಂದಿಗೆ ಪ್ರತಿಹಂತದಲ್ಲೂ ಕಾರ್ಖಾನೆ ಆಡಳಿತ ಮಂಡಳಿ ನಡೆಸಿದ ಅವ್ಯವಹಾರವನ್ನು ಉಡುಪಿ ಜಿಲ್ಲಾ ರೈತ ಸಂಘ ಮಾಹಿತಿ ಹಕ್ಕಿನಡಿಯಲ್ಲಿ ಹಾಗೂ ವಿವಿಧ ನಂಬಲರ್ಹ ಮೂಲಗಳಿಂದ ಮಾಹಿತಿ ಕಲೆಹಾಕಿ ಸಂಗ್ರಹಿಸಿದ ಲೆಕ್ಕಾಚಾರದಂತೆ ಆಡಳಿತ ಮಂಡಳಿ ಗುಜರಿ ವ್ಯವಹಾರದಲ್ಲಿ ಕನಿಷ್ಠ 14 ಕೋಟಿ ರೂ.ವಂಚನೆ ಎಸಗಿದೆ ಎಂದರು.
ಟೆಂಡರ್‌ನಲ್ಲಿ ನಮೂದಿಸಿದ ದರದಂತೆ ಪ್ರತಿ ಕಿಲೋ ಗುಜರಿಯನ್ನು 82 ರೂ.ಗೆ ಮಾರಾಟ ಮಾಡಬೇಕಿತ್ತು. ಆದರೆ ಆಡಳಿತ ಮಂಡಳಿ ಕೇವಲ 30ರೂ.ಗೆ ಅದನ್ನು ಪರಭಾರೆ ಮಾಡಿದೆ. ಅಲ್ಲದೇ ಗುತ್ತಿಗೆದಾರರು ಜಿಎಸ್‌ಟಿಯನ್ನು ಪ್ರತ್ಯೇಕ ವಾಗಿ ನೀಡಬೇಕಿದ್ದು, ಆದರೆ ಆಡಳಿತ ಮಂಡಳಿ ಒಟ್ಟು ಮೊತ್ತದಲ್ಲೇ ಜಿಎಸ್‌ಟಿಯನ್ನು ಸೇರಿಸಿರುವುದು ಅದರ ಬ್ರಹ್ಮಾಂಡ ಭ್ರಷ್ಟತೆಗೆ ನಿದರ್ಶನ. ಈ ಮೂಲಕ ಸರಕಾರಕ್ಕೂ ಕೋಟ್ಯಾಂತರ ರೂ. ಜಿಎಸ್‌ಟಿಯನ್ನು ತಪ್ಪಿಸಲಾಗಿದೆ ಎಂದು ದೂರಿದರು.
ಆಡಳಿತ ಮಂಡಳಿ ನೀಡುವ ಮಾಹಿತಿಯಂತೆ 46ಲೋಡ್ (11.74 ಲಕ್ಷ ಕೆ.ಜಿ.) ಗುಜರಿ ಮಾರಾಟವಾಗಿದ್ದರೆ, ರೈತ ಸಂಘ ಕಲೆ ಹಾಕಿದ ಮಾಹಿತಿಯಂತೆ 85 ಲೋಡ್ (ಒಟ್ಟು 22.66 ಲಕ್ಷ ಕೆ.ಜಿ.) ಗುಜರಿ ಮಾಆಟವಾಗಿದೆ. ಈ ಮಾರಾಟ ಹಾಗೂ ಸಾಗಾಟಕ್ಕೆ ಇರಲೇಬೇಕಾದ ಇ-ವೇ ಬಿಲ್, ವೇ ಬ್ರಿಜ್ ರಶೀದಿ, ಇನ್ವಾಯ್ಸ್, ಗೇಟ್‌ಪಾಸ್ ಸೇರಿದಂತೆ ಯಾವುದೇ ದಾಖಲೆಯನ್ನು ಕಾರ್ಖಾನೆ ಹೊಂದಿಲ್ಲ. ಇವೆಲ್ಲವೂ ಭಾರೀ ಭ್ರಷ್ಟಾಚಾರ ನಡೆದಿರುವುದರ ಸಂಕೇತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ರಮೇಶ್ ಕಾಂಚನ್, ಕುಶಲ ಶೆಟ್ಟಿ, ಜ್ಯೋತಿ ಹೆಬ್ಬಾರ್, ಪ್ರಖ್ಯಾತ ಶೆಟ್ಟಿ, ದಿನಕರ ಹೇರೂರು ಉಪಸ್ಥಿತರಿದ್ದರು.