ಯೂಟ್ಯೂಬ್‌ನಿಂದಾಗಿ ಹೆತ್ತವರ ಮಡಿಲು ಸೇರಿದ ಓಡಿಶಾದ ವಿಶೇಷಚೇತನ ಬಾಲಕ
ಉಡುಪಿ, ಜು.23: ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದ ಸಹಾಯದಿಂದ ನಾಪತ್ತೆಯಾದ ಒಡಿಶಾದ ವಿಶೇಷಚೇತನ ಬಾಲಕ ಸುಮಾರು ಆರು ತಿಂಗಳ ಬಳಿಕ ತನ್ನ ಹೆತ್ತವರ ಮಡಿಲು ಸೇರಿದ ಘಟನೆ ಉಡುಪಿಯಲ್ಲಿ ನಡೆದಿದೆ.
6 ತಿಂಗಳ ಹಿಂದೆ ಉಡುಪಿ ನಗರ ಹಾಗೂ ಬಸ್ ನಿಲ್ದಾಣ ಪರಿಸರದಲ್ಲಿ ಸುತ್ತಾಡುತ್ತಿದ್ದ ವಿಶೇಷ ಚೇತನ ಬಾಲಕ ದೀಪಕ್(18) ಎಂಬಾತನನ್ನು ಸಮಾಜ ಸೇವಕ ವಿಶು ಶೆಟ್ಟಿ ರಕ್ಷಿಸಿ ಉಪ್ಪೂರಿನ ಬೌದ್ಧಿಕ ದಿವ್ಯಾಂಗರ ಪುನರ್ವಸತಿ ಕೇಂದ್ರ ‘ಸ್ಪಂದನಾ’ಕ್ಕೆ ದಾಖಲಿಸಿದ್ದರು.
ಸ್ಪಂದನಾ ಕೇಂದ್ರದಲ್ಲಿ ಇತ್ತೀಚಿಗೆ ಗ್ರೇಟ್ ಇಂಡಿಯನ್ ಎಎಸ್‌ಎಂಆರ್ ಎಂಬ ಯೂಟ್ಯೂಬ್ ಚಾನಲ್ ಆಶ್ರಮದ ನಿವಾಸಿಗಳಿಗೆ ಭೋಜನ ನೀಡಿತ್ತು. ಈ ಸಂದರ್ಭದಲ್ಲಿ ಆಶ್ರಮ ವಾಸಿಗಳು ಊಟ ಮಾಡುವುದನ್ನು ಚಿತ್ರೀಕರಿಸಿ ಯೂಟ್ಯೂಬ್‌ಗೆ ಅಪಲೋಡ್ ಮಾಡಲಾಗಿತ್ತು. ಓಡಿಶಾದಲ್ಲಿ ಈ ವೀಡಿಯೋ ವನ್ನು ನೋಡಿದ ಅಲ್ಲಿನ ಯುವಕ ನಾಪತ್ತೆಯಾದ ದೀಪಕ್‌ನನ್ನು ಗುರುತಿಸಿ, ತಕ್ಷಣ ಬಾಲಕನ ಹೆತ್ತವರಿಗೆ ಮಾಹಿತಿ ನೀಡಿದ್ದನು.
ತಕ್ಷಣ ತಂದೆ ಜೋಗೇಂದ್ರ ಮೆಹರ್ ಅವರು ಉಡುಪಿಗೆ ಧಾವಿಸಿ ಬಂದು ತನ್ನ ಮಗನನ್ನು ಗುರುತಿಸಿದ್ದಾರೆ. ಓಡಿಶಾದಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದ ಪಟ್ನಾಘಡ್ ಠಾಣೆಯ ಎಎಸ್ಸೈ ಅಜಿತ್ ಮೋಹನ್ ಸೇಟಿ ಉಡುಪಿಗೆ ಶುಕ್ರವಾರ ಆಗಮಿಸಿದರು. ಈ ಸಂದರ್ಭದಲ್ಲಿ ಅವಶ್ಯಕ ಪ್ರಕ್ರಿಯೆಗಳನ್ನು ನಡೆಸಿ ಬಾಲಕನನ್ನು ತಂದೆಯ ವಶಕ್ಕೆ ಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಹಾಗೂ ಸ್ಪಂದನಾದ ಮುಖ್ಯಸ್ಥ ಜನಾರ್ದನ ಉಪಸ್ಥಿತರಿದ್ದರು.