ಬೆಳಕು ತೋರಿದ ಕರುಣಾಳು ಅರಸು: ಜಯನ್ ಮಲ್ಪೆ
ಉಡುಪಿ : ಕರ್ನಾಟಕ ಕಂಡ ಸಾಮಾಜಿಕ ಪರಿವರ್ತನೆಯ ನಾಯಕ, ಹಿಂದುಳಿದ ಜನರಿಗೆ ಮತ್ತು ದಲಿತರಿಗೆ ಬೆಳಕು ತೋರಿದ ಕರುಣಾಳು ಡಿ. ದೇವರಾಜ ಅರಸು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ರವಿವಾರ ಆಯೋಜಿಸ ಲಾದ ಡಿ.ದೇವರಾಜ ಅರಸು ಅವರ ೧೦೮ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಳುವವನೇ ಹೊಲದೊಡೆಯ ಎಂಬ ಕಾನೂನು ತಂದು ಗೇಣಿದಾರರಿಗೆ ಬದುಕು ನೀಡಿದ, ಮಲ ಹೊರುವ ಪದ್ಧತಿಯನ್ನು ನಿಷೇಧಿಸುವ ಮೂಲಕ ನಾಡಿನ ಬಡವರ, ಶೋಷಿತರ, ದಲಿತರ ತಬ್ಬಲಿ ಜಾತಿಗಳ ತಳಸಮುದಾಯ ದವರ ಕಷ್ಟವನ್ನು ಅರಿತು ಪ್ರಜಾಪ್ರುತ್ವದಲ್ಲಿ ಮದ್ದು ನೀಡಿದವರು ಎಂದರು.
ಮುಖ್ಯ ಅತಿಥಿಯಾಗಿ ಬುದ್ಧ ಟ್ರಸ್ಟ್‌ನ ಶಂಭು ಮಾಸ್ತರ್ ಮಾತನಾಡಿ, ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಸಮಾಜಿಕ ಸಮಾನತೆಯ ಸವಿ ಉಣಬಡಿಸುವ ಕಾರ್ಯಕ್ರಮಗಳನ್ನು ನೀಡಿದ ದೇವರಾಜ ಅರಸು ಅವರ ಸಾಧನೆಯನ್ನು ಈ ಸಮಾಜ ಎಂದೂ ಮರೆಯಬಾರದು ಎಂದು ತಿಳಿಸಿದರು.
ಬೋವಿ ಸಮಾಜದ ಅಧ್ಯಕ್ಷ ಶ್ರೀನಿವಾಸ ಕಾರ್ಕಳ ಮಾತನಾಡಿ, ಭೂರಹಿತ ಪರಿಶಿಷ್ಟಜಾತಿ ಮತ್ತು ವರ್ಗಗಳ ಕಾರ್ಮಿಕರು ತಾವು ವಾಸಿಸುತ್ತಿದ್ದ ಮನೆಯ ಮಾಲಕರನ್ನಾಗಿ ಮಾಡಿದ ನಮ್ಮ ಮನೆ ದೇವರು ಹಾಗೂ ಮಾನವತಾವಾದಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಈ ಸಂದರ್ದಲ್ಲಿ ದಲಿತ ಮುಖಂಡ ಗಣೇಶ್ ನೆರ್ಗಿ, ಸಂತೋಷ್ ಕಪ್ಪೆಟ್ಟು, ಕೆ.ಪಿ.ಈಶ್ವರ್ ಕುರ್ಕಲ್, ಆನಂದ ಎಸ್‌ಬಿಐ, ದಿನೇಶ್ ಜವನರೆಕಟ್ಟೆ ಮಾತನಾಡಿದರು.
ಮುಖಂಡರಾದ, ಭಗವಾನ್ ಮಲ್ಪೆ, ಮಹೇಶ್ ಚೆಂಡ್ಕಳ, ನವೀನ್ ಬನ್ನಂಜೆ, ವಸಂತ ಅಂಬಲಪಾಡಿ, ಸುವಿಜ್ ಮೂಡಬೆಟ್ಟು, ರವೀಂದ್ರ ಬಂಟಕಲ್ಲು, ಪುಷ್ಪಕರ್ ಗೋಪಾಲಕೃಷ್ಣ ಕುಂದಾಪುರ, ರಮೇಶ್, ಸುಶೀಲ್ ಕುಮಾರ್, ರಾಜ್‌ಕುಮಾರ್ ಪೆರ್ಣಂಕಿಲ, ಆನಂದ ಕುಂಜರ್‌ಗಿರಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಸಾದ್ ಮಲ್ಪೆ ಸ್ವಾಗತಿಸಿದರು. ಸುಕೇಶ್ ಪುತ್ತೂರು ವಂದಿಸಿದರು, ಅಶೋಕ್ ನಿಟ್ಟೂರು ಕಾರ್ಯಕ್ರಮ ನಿರೂಪಿಸಿದರು.