ಸಂಕಷ್ಟದಲ್ಲಿರುವ ಜಿಲ್ಲೆಯ ಗೋಡಂಬಿ ಉದ್ಯಮಿಗಳ ಬೇಡಿಕೆ ಈಡೇರಿಕೆಗೆ ಸಂಸದರಿಂದ ಕೇಂದ್ರ ವಿತ್ತ ಸಚಿವೆಗೆ ಮನವಿ
ಬೈಂದೂರು, ಆ.10: ಆರ್ಥಿಕ ಸಂಕಷ್ಟದಲ್ಲಿರುವ ಕರಾವಳಿ ಭಾಗದ ಗೋಡಂಬಿ ಸಂಸ್ಕರಣಾ ಉದ್ಯಮಗಳ ಬೇಡಿಕೆ ಈಡೇರಿಕೆಗೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.
ಹೊಸದಿಲ್ಲಿಯಲ್ಲಿ ಗುರುವಾರ ಸಚಿವರನ್ನು ಭೇಟಿ ಮಾಡಿದ ಸಂಸದರು ಈ ಸಂಬಂಧ ಮನವಿ ಸಲ್ಲಿಸಿದರು. ಗೋಡಂಬಿ ಸಂಸ್ಕರಣಾ ಉದ್ಯಮ ಎದುರಿಸುತ್ತಿರುವ ಎರಡೆರಡು ಇಎಂಐ ಪಾವತಿಯ ಭಾರದ ಬಗ್ಗೆ ಅವರ ಗಮನ ಸೆಳೆದರು. ಈ ಬಗ್ಗೆ ಮಧ್ಯಪ್ರವೇಶಿಸಿ, ಇಎಂಐ ಭಾರ ಕಡಿಮೆ ಮಾಡಲು ಅವರು ಮನವಿ ಮಾಡಿದರು.
ತಮ್ಮ ಮನವಿಯಲ್ಲಿ ಸಂಸದರು ಕರಾವಳಿ ಕರ್ನಾಟಕ, ಗೋಡಂಬಿ ಸಂಸ್ಕರಣಾ ಉದ್ಯಮಗಳ ಕೇಂದ್ರವಾಗಿದ್ದು, ರಾಜ್ಯದ ಗ್ರಾಮೀಣ ಭಾಗಗಳ ಸಾವಿರಾರು ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಉದ್ಯಮ ಜೀವನೋಪಾಯ ಒದಗಿಸಿದೆ. ಗೋಡಂಬಿ ಸಂಸ್ಕರಣೆಯು ಕರಾವಳಿ ಕರ್ನಾಟಕದ ಗ್ರಾಮೀಣ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. 1.50 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಉದ್ಯಮದ ಭಾಗವಾಗಿದ್ದು, ಆ ಮೂಲಕ, ಈ ಉದ್ಯಮ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ವಿವರಿಸಿದ್ದಾರೆ.
ಪ್ರಸ್ತುತ, ಗೋಡಂಬಿ ಸಂಸ್ಕರಣಾ ಘಟಕಗಳು ಕೋವಿಡ್ ಮತ್ತು ಕೋವಿಡ್ ನಂತರದ ಅವಧಿಯ ವಿವಿಧ ರೀತಿಯ ಸಾಲಗಳನ್ನು ಮರುಪಾವತಿಸಲು ವಿವಿಧ ರೀತಿಯ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿವೆ. ವಿಯೆಟ್ನಾಂನಿಂದ ಕಡಿಮೆ ಗುಣಮಟ್ಟದ ಕಚ್ಚಾ ಗೋಡಂಬಿ ಆಮದು, ಉದ್ಯಮವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘವು ಕಳೆದ ಜುಲೈನಲ್ಲಿ ಉಡುಪಿ ಜಿಲ್ಲೆಯಲ್ಲಿ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನೀಡಿದ ಮನವಿಯ ಬಗ್ಗೆಗೂ ಸಂಸದ ರಾಘವೇಂದ್ರ ಸಚಿವರ ಗಮನ ಸೆಳೆದಿದ್ದಾರೆ.
ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ (ಡಬ್ಲ್ಯೂಟಿಎಲ್ ) ಸಾಲದ ಮರುಪಾವತಿಯನ್ನು ಕನಿಷ್ಠ 18 ತಿಂಗಳುಗಳ ಕಾಲ ಅಮಾನತುಗೊಳಿಸಿ (ಮೊರಟೋರಿಯಂ) ಮತ್ತು ಅದಕ್ಕೆ ಅನುಗುಣವಾಗಿ ಮರುಪಾವತಿಯ ಅವಧಿಯನ್ನು ವಿಸ್ತರಿಸಬೇಕು. ಈಗಾಗಲೇ ಆರ್ಥಿಕ ದುಸ್ಥಿತಿಯಲ್ಲಿರು ವುದರಿಂದ ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಸಾಲ ಹಾಗು ಕೋವಿಡ್ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲು ವಿತ್ತ ಸಚಿವರನ್ನು ಸಂಸದ ರಾಘವೇಂದ್ರ ಮನವಿಯಲ್ಲಿ ಒತ್ತಾಯಿಸಿದ್ದಾರೆ.