ಮಣಿಪಾಲದಲ್ಲಿ ನಿಯಮ ಉಲ್ಲಂಘಿಸುವ ಪಬ್‌ಗಳ ವಿರುದ್ಧ ಕ್ರಮ: ಅಬಕಾರಿ ಡಿಸಿ ರೂಪಾ
ಉಡುಪಿ, ಆ.13: ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿ ರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಮಣಿಪಾಲದಲ್ಲಿ ಕಾರ್ಯಾಚರಣೆ ನಡೆಸಿದ್ದು, ನಿಯಮ ಮೀರದಂತೆ ಪಬ್‌ಗಳಿಗೆ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆಯು ನಿರಂತರವಾಗಿ ನಡೆಯಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಉಡುಪಿ ಜಿಲ್ಲಾ ಅಧಿಕಾರಿ ರೂಪ ತಿಳಿಸಿದ್ದಾರೆ.
ಮಣಿಪಾಲದಲ್ಲಿ ಒಟ್ಟು 12 ಪಬ್‌ಗಳಿದ್ದು, ಅದರಲ್ಲಿ ಕೇವಲ ಒಂದು ಪಬ್‌ಗೆ ಅನುಮತಿ ನೀಡಲಾಗಿದೆ. ಉಳಿದವು ಸಿಎಲ್7 ಹಾಗೂ ಸಿಎಲ್ 9 ಪರವಾನಿಗೆ ಯನ್ನು ಬಳಸಿ ವಿಸ್ತರಿಸಿಕೊಂಡಿರುವುದು. ಸಿಎಲ್7 ಪ್ರಕಾರ ಬೋರ್ಡಿಂಗ್ ಹಾಗೂ ಲಾಡ್ಜಿಂಗ್ ಅನುಮತಿ ಇದ್ದರೆ, ಸಿಎಲ್9 ಪ್ರಕಾರ ಮದ್ಯ ಹಾಗೂ ಆಹಾರ ಮಾರಾಟಕ್ಕೆ ಅನುಮತಿ ಇರುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಪರವಾನಿಗೆಯನ್ನು ಬಳಸಿಕೊಂಡು ಕೆಲವು ಮಾಲಕರು ಉಡುಪಿ ನಗರಸಭೆ ಹಾಗೂ ಅಬಕಾರಿ ಇಲಾಖೆಯ ಅನುಮತಿ ಪಡೆದು ಸಂಗೀತ ಹಾಕಿ ನೃತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಗಳು ಬಂದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಣಿಪಾಲದಲ್ಲಿ ವಾರಾಂತ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಕ್ರಮ ತೆಗೆದುಕೊಂಡಿದ್ದು, ಎಲ್ಲ ಕಡೆ ಚೆಕ್‌ಪೋಸ್ಟ್ ನಿರ್ಮಿಸಿ ತಪಾಸಣೆ ನಡೆಸಲಾಗಿದೆ. ಈ ಪ್ರಕ್ರಿಯೆ ವಾರಾಂತ್ಯದಲ್ಲಿ ಮುಂದುವರಿಯುತ್ತದೆ. ಸದ್ಯಕ್ಕೆ ಮಣಿಪಾಲದಲ್ಲಿ ಕೆಎಸ್‌ಆರ್‌ಪಿ ತುಕಡಿ ಸಹಿತ ಭದ್ರತೆಯನ್ನು ಮುಂದುವರೆಸಲಾಗಿದೆ ಎಂದು ಎಸ್ಪಿ ಅಕ್ಷಯ್ ಹಾಕೇ ತಿಳಿಸಿದ್ದಾರೆ.