ಕೋಡಿ ಕೃಷಿಭೂಮಿಗೆ ಉಪ್ಪುನೀರು: ಕೃಷಿ ಅಧಿಕಾರಿ ಭೇಟಿ

ಕುಂದಾಪುರ: ಕೋಡಿ ಉಪ್ಪುನೀರು ನುಗ್ಗಿದ ಕೃಷಿಭೂಮಿ ಪ್ರದೇಶಕ್ಕೆ ಮಂಗಳವಾರ ಕುಂದಾಪುರ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೂಪಾ ಮಾಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಲವು ಎಕರೆ ಕೃಷಿ ಭೂಮಿ ಪ್ರದೇಶಗಳಿಗೆ ಉಪ್ಪುನೀರು ನುಗ್ಗಿರುವುದು ಕಂಡುಬಂದಿದೆ. ಪರಿಸ್ಥಿತಿ ಅವಲೋಕಿಸಲಾಗಿದ್ದು ಇಲ್ಲಿನ ವಸ್ತುಸ್ಥಿತಿಯ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭ ಕೃಷಿ ಇಲಾಖೆಯ ಆತ್ಮ ಯೋಜನೆ ಸಿಬ್ಬಂದಿ ರಮಿತಾ, ಸ್ಥಳೀಯ ಮುಖಂಡರಾದ ಶಂಕರ ಪೂಜಾರಿ, ಯೋಗೇಶ್ ಪೂಜಾರಿ ಕೋಡಿ, ಆನಂದ್ ಮಾಸ್ಟರ್ ಕೋಡಿ ಉಪಸ್ಥಿತರಿದ್ದರು.
ಶಾಸಕರಿಂದ ಸಚಿವರಿಗೆ ಮನವಿ
ಕೋಡಿ ಪರಿಸರದಲ್ಲಿ ಕೃಷಿ ಜಮೀನು ಮತ್ತು ಮನೆಗಳಿಗೆ ಉಪ್ಪುನೀರು ಬರದಂತೆ ತಡೆಯಲು ನದಿ ದಂಡೆ ಸಂರಕ್ಷಣೆಗೆ ಅನುದಾನ ಮಂಜೂರು ಮಾಡಲು ಕುಂದಾಪುರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿಯೇ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಎನ್.ಎಸ್.ಬೋಸರಾಜರನ್ನು ಭೇಟಿ ಮಾಡಿ ಮನವಿ ನೀಡಿದರು.
ಕೋಡಿ ಪರಿಸರದಲ್ಲಿ ನದಿಗಳಿಂದ ಉಪ್ಪುನೀರು ಉಕ್ಕಿ ಕೃಷಿ ಜಮೀನು ಮತ್ತು ಮನೆಗಳಿಗೆ ನುಗ್ಗುತ್ತಿದ್ದು ಈ ಸಮಸ್ಯೆಯಿಂದ ಕೋಡಿ ಭಾಗದ ಜನ ವಸತಿ ಪ್ರದೇಶದ ಗ್ರಾಮಸ್ಥರು ದಿನನಿತ್ಯ ಸಮಸ್ಯೆಗೆ ಒಳಗಾಗಿದೆ. ಉಪ್ಪುನೀರು ನುಗ್ಗುವುದರಿಂದ ನೂರಾರು ಎಕರೆ ಕೃಷಿ ಜಮೀನಿನಲ್ಲಿ ಕೃಷಿ ಮಾಡಲಾಗುತ್ತಿಲ್ಲ. ಆದುದರಿಂದ ಉಪ್ಪುನೀರು ಬರದಂತೆ ತಡೆಯಲು ನದಿ ದಂಡೆ ಸಂರಕ್ಷಣೆಗೆ ಆದ್ಯತೆ ನೀಡುವ ಸಲುವಾಗಿ ಅನುದಾನ ಮಂಜೂರು ಮಾಡುವಂತೆ ಮನವಿ ಯಲ್ಲಿ ತಿಳಿಸಲಾಗಿದೆ.