ಅಜೆಕಾರು ಕೊಲೆ ಪ್ರಕರಣ| ತನಿಖೆಯ ದಾರಿ ತಪ್ಪಿಸುವ ಸಾಧ್ಯತೆ: ಬಾಲಕೃಷ್ಣ ಪೂಜಾರಿ ಕುಟುಂಬಕ್ಕೆ ಶಂಕೆ, ಆತಂಕ
ಉಡುಪಿ: ಕಾರ್ಕಳ ತಾಲೂಕು ಅಜೆಕಾರು ಎಂಬಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಉಸಿರುಗಟ್ಟಿಸಿ ಕೊಂದ ಪ್ರಕರಣದಲ್ಲಿ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಸಂಶಯವನ್ನು ಕೊಲೆಯಾದ ಬಾಲಕೃಷ್ಣ ಪೂಜಾರಿಯ ಕುಟುಂಬ ವ್ಯಕ್ತಪಡಿಸಿದೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಕೃಷ್ಣ ಪೂಜಾರಿ ಅವರ ಸಹೋದರರು ಹಾಗೂ ತಂದೆ, ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದರೂ, ತನಿಖೆಯ ದಾರಿ ತಪ್ಪಿಸುವ ಕೆಲಸ ನಡೆಯು ತ್ತಿರುವ ಬಗ್ಗೆ ನಮಗೆ ಶಂಕೆ ಹಾಗೂ ಆತಂಕ ಉಂಟಾಗಿದೆ ಎಂದರು.
ಪ್ರಕರಣದ ಎರಡನೇ ಆರೋಪಿಯಾಗಿರುವ ದಿಲೀಪ್ ಹೆಗ್ಡೆ, ಆರ್ಥಿಕವಾಗಿ ಪ್ರಬಲವಾಗಿದ್ದು, ತನಿಖೆಯನ್ನು ನಿಧಾನಗೊಳಿ ಸುವ ಹಾಗೂ ಅದನ್ನು ಹಳ್ಳ ಹಿಡಿಸುವ ಕೆಲಸ ಕುಟುಂಬದಿಂದ ನಡೆಯುತ್ತಿರುವ ಬಗ್ಗೆ ಸಂಶಯ ಉಂಟಾಗಿದೆ ಎಂದು ಬಾಲಕೃಷ್ಣ ಪೂಜಾರಿ ಅವರ ಸಹೋದರ ಪ್ರಕಾಶ್ ಪೂಜಾರಿ ತಿಳಿಸಿದರು.
ಬಾಲಕೃಷ್ಣ ಪೂಜಾರಿ ಅವರ ಪತ್ನಿ ಪ್ರತಿಮಾ ಎಂಬಾಕೆ ತನ್ನ ಪ್ರಿಯಕರ ಕಾರ್ಕಳದ ಉದ್ಯಮಿ ದಿಲೀಪ್ ಹೆಗ್ಡೆ ಜೊತೆ ಸೇರಿ ಕಳೆದ ಮೂರು ತಿಂಗಳಿನಿಂದ ಸ್ಲೋ ಪಾಯ್ಸನ್ ನೀಡುತಿದ್ದರು. ಇದರಿಂದ ಬಾಲಕೃಷ್ಣ ಪೂಜಾರಿ ಅವರನ್ನು ಮಣಿಪಾಲದ ಕೆಎಂಸಿಯೂ ಸೇರಿದಂತೆ ಮಂಗಳೂರು ಹಾಗೂ ಬೆಂಗಳೂರಿನ ನಾಲ್ಕೈದು ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು ಎಂದರು.
ಆದರೆ ಆಸ್ಪತ್ರೆಗಳಲ್ಲಿ ಪರೀಕ್ಷೆಗೊಳಪಡಿಸಿ ಅಣ್ಣನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಇದು ಯಾಕೆ ಗೊತ್ತಾಗಿಲ್ಲ ಎಂದು ಪ್ರಶ್ನಿಸಿದ ಪ್ರಕಾಶ್ ಪೂಜಾರಿ, ಸ್ಲೋ ಪಾಯ್ಸನ್ ವಿಷಯವನ್ನು ಆಸ್ಪತ್ರೆಯವರು ಯಾಕಾಗಿ ಮುಚ್ಚಿಟ್ಟರು ಎಂದು ಪ್ರಶ್ನೆ ಮಾಡಿದರು. ಪ್ರತಿಮಾ ಚಿಕಿತ್ಸೆಯ ಸಂದರ್ಭದಲ್ಲಿ ನಮಗ್ಯಾರಿಗೂ ಆಸ್ಪತ್ರೆಯ ಬಳಿ ಬರಲು, ವೈದ್ಯರೊಂದಿಗೆ ಮಾತನಾಡಲು ಬಿಡುತ್ತಿರಲಿಲ್ಲ ಎಂದು ಅವರು ದೂರಿದರು.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದಿಲೀಪ್ ಹೆಗ್ಡೆ ಕಾರ್ಕಳದ ಪ್ರತಿಷ್ಠಿತ ಉದ್ಯಮಿಯ ಮಗ. ಅವರಿಗೆ ಕಾರ್ಕಳ ಸೇರಿದಂತೆ ಹಲವು ಕಡೆ ಬಾರ್‌ಗಳಿವೆ. ದಿಲೀಪ್ ತಂದೆ ಬೇರೆ ಬೇರೆ ಮಾಧ್ಯಮಗಳೊಂದಿಗೆ ಮಾತನಾಡಿ ತನ್ನ ಮಗ ನಿರಪರಾಧಿ ಎಂದು ಹೇಳಿದ್ದಾರೆ. ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ಮಗ ನಿರಪರಾಧಿಯಾಗಿ ಹೊರಬರಲಿ ಎಂದು ಆತನ ಹೆಸರಿನಲ್ಲಿ ಪೂಜೆಯನ್ನು ಮಾಡಿಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯ ಮೇಲೆ ದಿಲೀಪ್ ಕುಟುಂಬ ಪ್ರಭಾವ ಬೀರುವ ಆತಂಕ ನಮಗಿದೆ ಎಂದರು.
ಪ್ರಕರಣದ ಕುರಿತು ತ್ವರಿತಗತಿಯಲ್ಲಿ, ಸಮರ್ಪಕ ರೀತಿಯಲ್ಲಿ ತನಿಖೆ ನಡೆಯಬೇಕು ಎಂದು ನಾವು ಈಗಾಗಲೇ ಡಿವೈಎಸ್ಪಿ ಅವರಿಗೆ ಆಗ್ರಹ ಮಾಡಿದ್ದೇವೆ. ಈ ಬಗ್ಗೆ ತಂದೆ ಸಂಜೀವ ಪೂಜಾರಿ ಅವರೊಂದಿಗೆ ನಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರಿಗೆ ಮನವಿಯೊಂದನ್ನು ಅರ್ಪಿಸಲಿದ್ದೇವೆ ಎಂದು ಪ್ರಕಾಶ್ ಪೂಜಾರಿ ತಿಳಿಸಿದರು.
ನಮಗೆ ನ್ಯಾಯಬೇಕು. ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗುವುದು ಖಂಡಿತ. ಇದೊಂದು ಅಪರೂಪದ ಪ್ರಕರಣ ಎಂದು ಹಿರಿಯ ಅಧಿಕಾರಿಗಳು ಈಗಾಗಲೇ ನಮಗೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗ ದಿದ್ದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ನಡೆದರೆ ನಾವು ಎಲ್ಲರೊಂದಿಗೆ ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಮೊದಲ ಆರೋಪಿ ಪ್ರತಿಮಾ ಅವರ ಸಹೋದರ ಸಂದೀಪ್, ಬಾಲಕೃಷ್ಣ ಪೂಜಾರಿ ಅವರ ಸಹೋದರಿ ಶಶಿರೇಖಾ, ತಂದೆ ಸಂಜೀವ ಪೂಜಾರಿ, ತಾರನಾಥ ಕೋಟ್ಯಾನ್ ಉಪಸ್ಥಿತರಿದ್ದರು.
ಅಜೆಕಾರಿನ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣವನ್ನು ತ್ವರಿತಗತಿಯಲ್ಲಿ ನಡೆಸಿ ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬಾಲಕೃಷ್ಣ ಕುಟುಂಬದ ಸದಸ್ಯರು ತಂದೆ ಸಂಜೀವ ಪೂಜಾರಿ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಅವರಿಗೆ ಮನವಿ ಸಲ್ಲಿಸಿದರು.
ತಂಗಿ ಪ್ರತಿಮಾ ನನಗೂ ವಿಷ ಹಾಕಿರುವ ಸಾಧ್ಯತೆ: ಸಂದೀಪ್
ಪ್ರಿಯಕರ ದಿಲೀಪ್ ಹೆಗ್ಡೆ ಸಹಕಾರದೊಂದಿಗೆ ಪತಿ ಬಾಲಕೃಷ್ಣ ಪೂಜಾರಿಗೆ ಅವರು ತಿನ್ನುವ ಆಹಾರದಲ್ಲಿ ಸ್ಲೋಪಾಯ್ಸನ್ ಬೆರೆಸಿ ಕೊನೆಗೆ ಉಸಿರುಗಟ್ಟಿಸಿ ಸಾಯಿಸಿದ ಆರೋಪ ಹೊತ್ತಿರುವ ಪ್ರತಿಮಾ, ತನ್ನ ಅನೈತಿಕ ಸಂಬಂಧದ ಬಗ್ಗೆ ತಿಳಿದಿದ್ದ ತನಗೂ ಆಹಾರದಲ್ಲಿ ವಿಷ ಬೆರೆಸಿ ನೀಡಿರುವ ಸಂಶಯ ನನಗಿದೆ ಎಂದು ಪ್ರತಿಮಾರ ಸಹೋದರ ಸಂದೀಪ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ನಾನು ವಿವಿಧ ಸಮಸ್ಯೆ ಗಳಿಂದ ಬಳಲುತಿದ್ದೇನೆ. ಒಂದು ತಿಂಗಳಿನಿಂದ ನರ ಸಮಸ್ಯೆ ಇದೆ. ಕುತ್ತಿಗೆ, ಕಾಲಿನಲ್ಲಿ ನರದ ಸಮಸ್ಯೆ ಕಾಣಿಸಿಕೊಂಡಿದೆ. ಎಲ್ಲಾ ರೀತಿಯ ಪರೀಕ್ಷೆ ಮಾಡಿಸಿಕೊಂಡಿದ್ದೇನೆ. ಆದರೆ ಯಾವುದೇ ಕಾಯಿಲೆ ಪತ್ತೆಯಾಗಿಲ್ಲ. ನಾಳೆ ಮತ್ತೆ ಮೆಡಿಕಲ್ ಚೆಕ್ ಅಪ್‌ಗೆ ಹೋಗುತ್ತೇನೆ ಎಂದರು.
ಸಹೋದರಿ ನನಗೂ ಸ್ಲೋ ಪಾಯಿಸನ್ ಹಾಕಿರುವ ಸಂಶಯ ನನಗೆ ಬರುತ್ತಿದೆ. ಆಕೆಯ ಅಕ್ರಮ ಸಂಬಂಧಕ್ಕೆ ನಾನು ಅಡ್ಡಿಯಾಗಿರುವುದರಿಂದ ಹೀಗೆ ಮಾಡಿರಬಹುದು. ಆದರೆ ಹೆಚ್ಚು ಹಾಕಿರುವ ಸಾಧ್ಯತೆ ಇಲ್ಲ. ಏಕೆಂದರೆ ನಾನು ಆಕೆಯ ಮನೆಯ ಊಟ ಮಾಡುವುದು ಕಡಿಮೆ. ಇತ್ತೀಚಿನ ದಿನಗಳಲ್ಲಿ ಎರಡು ಬಾರಿ ನಾನು ಅವಳ ಮನೆಯಲ್ಲಿ ಊಟ ಮಾಡಿದ್ದೆ ಎಂದರು.
ಕಾರ್ಕಳ ಕ್ಯಾಂಪ್ ಆಸ್ಪತ್ರೆ, ಮಣಿಪಾಲದ ಕೆಎಂಸಿ, ಮಂಗಳೂರಿನ ವೆನ್‌ಲಾಕ್, ಬೆಂಗಳೂರಿನ ನಿಮ್ಹಾನ್ಸ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದ ಬಾವ ಬಾಲಕೃಷ್ಣ ಪೂಜಾರಿ, ಬಂದ ದಿನ ರಾತ್ರಿಯೇ ಮೃತಪಟ್ಟಿರುವುದು ನನಗೆ ಸಂಶಯ ಮೂಡಿಸಿತ್ತು. ಮೃತದೇಹವನ್ನು ನೋಡುವಾಗ ಮುಖದಲ್ಲಿ, ಕತ್ತಿನ ಬಳಿ ಆದ ಗಾಯದ ಬಗ್ಗೆ ತಂಗಿಯನ್ನು ಪ್ರಶ್ನಿಸಿದಾಗ ಆಕೆ ಹಾರಿಕೆ ಉತ್ತರ ನೀಡಿದ್ದಳು ಎಂದರು.
ಬೆಂಗಳೂರಿನಲ್ಲಿ ಅಣ್ಣನ ಚಿಕಿತ್ಸೆಗೆ ತುಂಬಾ ಓಡಾಡಿದ್ದ ಶಶಿರೇಖಾ ಅಣ್ಣನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದಾಗ ನನಗೂ ಸಂಶಯ ಬಂದು ಪೊಲೀಸರಿಗೆ ದೂರು ನೀಡಿ ಪೋಸ್ಟ್‌ಮಾರ್ಟಂ ಮಾಡಿಸಿದ್ದೆವು. ಮಣಿಪಾಲ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ಮಾಡಲಾಗಿದೆ. ಅದರಲ್ಲಿ ಉಸಿರುಗಟ್ಟಿಸಿ ಕೊಲೆ ಎಂದು ವರದಿಯಾಗಿದೆ. ಹೀಗಾಗಿ ಆಕೆಯನ್ನು ಪ್ರಶ್ನಿಸಿದಾಗ ಕೊನೆಗೂ ಸ್ಲೋ ಪಾಯ್ಸನ್ ನೀಡಿರುವುದನ್ನು ಬಾಯಿ ಬಿಟ್ಟಳು. ಇದೀಗ ವಿಷದ ಮಾಹಿತಿಗೆ ಅಣ್ಣನ ಮೂಳೆ ಯನ್ನು ಫೋರೆನ್ಸಿಕ್ ಟೆಸ್ಟ್‌ಗಾಗಿ ಪೊಲೀಸರು ಪಡೆದುಕೊಂಡಿದ್ದಾರೆ ಎಂದರು.
ಕೊಲೆ ಮಾಡಿದ ರಾತ್ರಿ ನಾನು ಮನೆಗೆ ಹೋಗಿದ್ದೆ. ಬಾವನಿಗೆ ನಾನೇ ಸ್ನಾನ ಮಾಡಿಸಿದ್ದೆ. ತಾನೇ ಊಟ ಕೊಡುವುದಾಗಿ ಹೇಳಿದ್ದಲ್ಲದೇ ಮನೆಗೆ ಹೋಗುವಂತೆ ನನಗೆ ಒತ್ತಾಯಿಸಿದಳು. ಹೀಗಾಗಿ 11 ಗಂಟೆಗೆ ನಾನು ಮನೆಗೆ ಮರಳಿದ್ದೆ. ಮುಂಜಾನೆ ಮೂರೂವರೆ ಗಂಟೆಗೆ ಅಪ್ಪನಿಗೆ ಕರೆ ಮಾಡಿ, ಗಂಡ ಉಸಿರಾಟಕ್ಕೆ ತೊಂದರೆ ಪಡುತ್ತಿರುವುದಾಗಿ ಹೇಳಿದಾಗ ನಾವೆಲ್ಲಾ ಹೋಗಿ ನೋಡಿದಾಗ ಬಾವ ಮೃತಪಟ್ಟಿದ್ದರು ಎಂದರು.
ನನ್ನ ಸಹೋದರಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಗೆ ಕಠಿಣ ಶಿಕ್ಷೆಯಾಗಬೇಕೆಂಬುದು ನನ್ನ ಆಶಯ ಎಂದರು.