ಮಣಿಪಾಲ: ಅಖಿಲ ಭಾರತ ಅಂತರ ವಿವಿ ಮಹಿಳಾ ಟೆನಿಸ್ ಟೂರ್ನಿಗೆ ಚಾಲನೆ
ಉಸ್ಮಾನಿಯಾ ವಿವಿ, ಮಹರ್ಷಿ ದಯಾನಂದ ವಿವಿ ಶುಭಾರಂಭ
ಉಡುಪಿ: ಮೂರು ದಿನಗಳ ಹಿಂದೆ ಇಲ್ಲೇ ನಡೆದ ದಕ್ಷಿಣ ವಲಯ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದ ಹೈದರಾಬಾದ್‌ನ ಉಸ್ಮಾನಿಯಾ ವಿವಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆಶ್ರಯದಲ್ಲಿ ಇಂದು ಪ್ರಾರಂಭಗೊಂಡ ಅಖಿಲ ಭಾರತ ಅಂತರ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಂದು ನಡೆದ ತನ್ನ ಮೊದಲ ಪಂದ್ಯದಲ್ಲಿ ಉಸ್ಮಾನಿಯಾ ವಿವಿ, ಪಶ್ಚಿಮ ವಲಯ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯನ್ನು 2-0 ಅಂತರದಿಂದ ಪರಾಭವಗೊಳಿಸಿತು. ಮತ್ತೊಂದು ಪಂದ್ಯದಲ್ಲಿ ಸೋಲಾಪುರದ ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ವಿವಿ, ಜಾದವಪುರ್ ವಿವಿಯನ್ನು 2-0 ಅಂತರಿಂದ ಹಿಮ್ಮೆಟ್ಟಿಸಿತು.
ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿ, ಮದರಾಸಿನ ಅಣ್ಣಾ ವಿವಿಯನ್ನು 2-1 ಪಂದ್ಯಗಳ ಅಂತರದಿಂದ ಸೋಲಿಸಿದರೆ, ಪಂಡಿತ್ ರವಿಶಂಕರ್ ಶುಕ್ಲಾ ವಿವಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯನ್ನು 2-1ರ ಅಂತರದಿಂದ ಪರಾಭವಗೊಳಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ಪಠಾಣ್‌ನ ಹೇಮಚಂದ್ರಾಚಾರ್ಯ ನಾರ್ತ್ ಗುಜರಾತ್ ವಿವಿ, ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಎಸ್‌ಎಸ್‌ನ್ನು 2-0 ಅಂತರಿಂದ ಸೋಲಿಸಿತು.
ಉದ್ಘಾಟನೆ: ಮಣಿಪಾಲದ ಮರೇನಾದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಟೆನಿಸ್ ಆಟಗಾರ್ತಿ ಡಾ.ನಯನಿಕಾ ರೆಡ್ಡಿ ಟೂರ್ನಿಯನ್ನು ಉದ್ಘಾಟಿಸಿ ದರು. ದೇಶದ ನಾಲ್ಕು ವಲಯಗಳ ಅಗ್ರ 16 ತಂಡಗಳು ನಾಲ್ಕು ದಿನಗಳ ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಹೆಯ ಕುಲಪತಿ ಲೆ.ಜ. (ಡಾ.)ಎಂ.ಡಿ.ವೆಂಕಟೇಶ್, ಮಾಹೆ ಯಾವತ್ತೂ ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದೆ.ನಮ್ಮ ಯುವ ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡಲು ಮತ್ತು ಅವರ ಛಾಪು ಮೂಡಿಸಲು ವೇದಿಕೆಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಈ ಟೂರ್ನಿ ಪ್ರತಿಬಿಂಬಿಸುತ್ತದೆ ಎಂದರು.
ಪ್ರೊ ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್ ಅದ್ಯಕ್ಷತೆ ವಹಿಸಿದ್ದರು. ಮಾಹೆಯ ಸ್ಪೋರ್ಟ್ಸ್ ಕೌನ್ಸಿಲ್‌ನ ಮುಖ್ಯ ಸಂಯೋಜಕ ಡಾ.ಉಪೇಂದ್ರ ನಾಯಕ್, ಮುಖ್ಯ ರೆಫರಿ ಗೌರಂಗ್ ನಲ್ವಾಯ ಮತ್ತು ಮಾಹೆ ಸ್ಪೋರ್ಟ್ಸ್ ಕೌನ್ಸಿಲ್ ಕಾರ್ಯದರ್ಶಿ ಡಾ. ವಿನೋದ್ ಸಿ.ನಾಯಕ್ ಉಪಸ್ಥಿತರಿದ್ದರು.