ಅಖಿಲ ಭಾರತ ನೌ ಸೈನಿಕ್ ಶಿಬಿರ: ಕರ್ನಾಟಕ-ಗೋವಾ ನೌಕಾದಳ ಸಮಗ್ರ ಚಾಂಪಿಯನ್
ತಂಡದಲ್ಲಿ ಉಡುಪಿಯ 6 ಎನ್‌ಸಿಸಿ ಕೆಡೆಟ್ಸ್
ಉಡುಪಿ, ಅ.26: ಮಹಾರಾಷ್ಟ್ರದ ಲೋನಾವಾಲ ಐಎನ್‌ಎಸ್ ಶಿವಾಜಿ ನೋವೆಲ್ ಬೇಸ್‌ನಲ್ಲಿ 10 ದಿನಗಳ ಕಾಲ ನಡೆದ ಅಖಿಲ ಭಾರತ ನೌ ಸೈನಿಕ್ ಶಿಬಿರದಲ್ಲಿ ನೌಕಾದಳ ವತಿಯಿಂದ ನಡೆದ ಬೋಟ್ ಪುಲ್ಲಿಂಗ್‌ನಲ್ಲಿ ಕರ್ನಾಟಕ- ಗೋವಾ ಎನ್‌ಸಿಸಿ ಡೈರೆಕ್ಟರೇಟ್‌ನ ಕೆಡೆಟ್‌ಗಳು ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಈ ತಂಡದಲ್ಲಿ ಉಡುಪಿಯ ಒಟ್ಟು ಆರು ಮಂದಿ ಕೆಡೆಟ್‌ಗಳು ಸ್ಥಾನ ಪಡೆದಿದ್ದರು.
ಬಾಲಕಿಯರ ವಿಭಾಗದಲ್ಲಿ ದಿಲ್ಲಿ, ಕರ್ನಾಟಕ-ಗೋವಾ ಹಾಗೂ ಉತ್ತರಖಂಡ ತಂಡಗಳು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರೆ, ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರ, ದಿಲ್ಲಿ ಹಾಗೂ ಕರ್ನಾಟಕ- ಗೋವಾ ಡೈರಕ್ಟರೇಟ್ ತಂಡ ಗಳು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದವು. ಅಂತಿಮವಾಗಿ ಕರ್ನಾಟಕ-ಗೋವಾ ತಂಡ ಸಮಗ್ರ ಚಾಂಪಿಯನ್ ತಂಡವಾಗಿ ಆರು ವರ್ಷಗಳ ನಂತರ ಸಿಲ್ವರ್ ಕಾಕ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕರ್ನಾಟಕ- ಗೋವಾ ಎನ್‌ಸಿಸಿ ಡೈರೆಕ್ಟರೇಟ್ ತಂಡವನ್ನು ಉಡುಪಿ ಎಂಜಿಎಂ ಕಾಲೇಜಿನ ಕೆಡೆಟ್‌ಗಳಾದ ಪ್ರತೀಕ್ಷಾ ಕುಂದರ್, ಅಭಿಷೇಕ್ ಭಜಂತ್ರಿ, ರಜತ್ ಪಾಡಿಗಾರ್ ಹಾಗೂ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕೆಡೆಟ್‌ಗಳಾದ ಸುದೀಪ್ ಸುವರ್ಣ, ಸತ್ಯದೀಪ್ ರಾವ್ ಹಾಗೂ ಅಜಯ್ ಜೋಹಾನ್ ಬ್ರಾಗ್ಸ್ ಪ್ರತಿನಿಧಿಸಿದ್ದರು.
ಶಿಬಿರದಲ್ಲಿ ದೇಶಾದ್ಯಂತದಿಂದ 17 ಎನ್‌ಸಿಸಿ ಡೈರಕ್ಟರೇಟ್‌ನಿಂದ ಆಗಮಿಸಿದ್ದ 408 ಬಾಲಕರು ಹಾಗೂ 204 ಬಾಲಕಿ ಯರು ಭಾಗವಹಿಸಿದ್ದರು. ಈ ಬಾರಿ 100 ಮಂದಿ ಕೆಡೆಟ್‌ಗಳನ್ನು ರಕ್ಷಣಾ ಪಡೆಯ ಅಧಿಕಾರಿಗಳಾಗಿ ನೇರವಾಗಿ ಆಯ್ಕೆ ಮಾಡಲಾಗಿದೆ.