ಮಂಗಳೂರು ವಿವಿಯಲ್ಲಿ ವಿದ್ಯಾರ್ಥಿ ವಿರೋಧಿ ನೀತಿ ಆರೋಪ: ಎಬಿವಿಪಿ ಧರಣಿ
ಕುಂದಾಪುರ, ಆ.28: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಖಂಡಿಸಿ, ವಿವಿಧ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕುಂದಾಪುರ ಘಟಕ ಬುಧವಾರ ಕುಂದಾಪುರ ಮಿನಿ ವಿಧಾನ ಸೌಧದ ಎದುರು ಧರಣಿ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಚಾಲಕ ಕಾರ್ತಿಕ್, ಮಂಗಳೂರು ವಿವಿ ವ್ಯಾಪ್ತಿಯಲ್ಲಿ 188 ಕಾಲೇಜುಗಳಲ್ಲಿ 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ವಿವಿ ಇಂದು ಸಮಸ್ಯೆಗಳ ಗೂಡಾಗಿದೆ. ಪದವಿಪೂರ್ವ ತರಗತಿಗಳು ಆರಂಭಗೊಂಡು ಎರಡು ತಿಂಗಳು ಕಳೆದರೂ ಇದುವರೆಗೂ ಹಾಸ್ಟೆಲ್ ಪ್ರವೇಶಾ ತಿಗೆ ಇಲಾಖೆ ಅನುಮತಿ ಕೊಟ್ಟಿಲ್ಲ. ಗ್ರಾಮೀಣ ಭಾಗದಿಂದ ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದು, ಈಗಾಗಲೇ ಹಾಸ್ಟೆಲ್ ಬೇಡಿಕೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಶೀಘ್ರವೇ ಹಾಸ್ಟೆಲ್ ಪ್ರವೇಶಾತಿಗೆ ಅವಕಾಶ ಮಾಡಿ ಕೊಡಬೇಕು ಮತ್ತು ಹಾಸ್ಟೆಲ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಕುಂದಾಪುರ ಶಾಸ್ತ್ರೀ ಸರ್ಕಲ್ ವೃತ್ತದಿಂದ ಮಿನಿವಿಧಾನ ಸೌಧದವರೆಗೂ ಪ್ರತಿಭಟನಾ ರ್ಯಾಲಿ ನಡೆಯಿತು. ಸಹ ಸಂಚಾ ಲಕ ದರ್ಶನ್, ವಿದ್ಯಾರ್ಥಿ ನಾಯಕ ಆದರ್ಶ್ ಹಾಗೂ ಪ್ರಮುಖರು ಹಾಜರಿದ್ದರು. ಬಳಿಕ ತಹಸೀಲ್ದಾರ್ ಶೋಭಾಲಕ್ಷ್ಮೀ ಮೂಲಕ ಮನವಿ ಸಲ್ಲಿಸಲಾಯಿತು.
‘ಎಬಿವಿಪಿ ಪ್ರತಿಭಟನೆಗೆ ಅರ್ಥವೇ ಇಲ್ಲ’
ಆ.22ರಂದು ಸಭಾಪತಿ ಯು.ಟಿ.ಖಾದರ್ ನೇತೃತ್ವದಲ್ಲಿ ಉಪಕುಲಪತಿಗಳು, ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಯ ಮುಖಂಡರು ಅಂಕಪಟ್ಟಿ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದು, ಸೆ.4ರಿಂದ ಅಂಕಪಟ್ಟಿಯನ್ನು ಸಮರ್ಪಕವಾಗಿ ವಿತರಿಸುವ ಬಗ್ಗೆ ಉಪಕುಲಪತಿಗಳು ಆಶ್ವಾಸನೆ ಕೊಟ್ಟಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನೂ ನೀಡಲಾಗಿದೆ. ಆದರೂ ಎಬಿವಿಪಿ ಪ್ರತಿಭಟನೆ ಮಾಡಿದ್ದು, ಈ ಪ್ರತಿಭಟನೆಗೆ ಅರ್ಥವೇ ಇಲ್ಲ. ಸೆ.4ರ ಬಳಿಕ ಸಮಸ್ಯೆ ಸರಿಪಡಿಸದಿದ್ದಲ್ಲಿ ಎನ್‌ಎಸ್‌ಯುಐ ವಿದ್ಯಾರ್ಥಿಗಳ ಪರ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಸಯ್ಯದ್ ಫುರ್ಖಾನ್ ಹೆಮ್ಮಾಡಿ ಹಾಗೂ ಕುಂದಾಪುರ ಸಂಚಾಲಕ ಸುಜನ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.