ಪರಶುರಾಮನ ವಿಗ್ರಹ ವಿರೂಪಗೊಳಿಸಿದ ಆರೋಪ : ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಕಾರ್ಕಳ, ಅ.22: ಯರ್ಲಪಾಡಿ ಗ್ರಾಮದ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮನ ವಿಗ್ರಹವನ್ನು ಕಾಂಗ್ರೆಸ್ ಕಾರ್ಯಕರ್ತರು ವಿರೂಪಗೊಳಿಸಿರುವುದಾಗಿ ಆರೋಪಿಸಿ ಬಿಜೆಪಿ ಮುಖಂಡ ಸುನೀಲ್ ಹೆಗ್ಡೆ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಮಿಕಲ್ ಬೆಟ್ಟದಲ್ಲಿ ಕಳೆದ ಸಾಲಿನಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಪರಶುರಾಮ ವಿಗ್ರಹದ ಮುಂದುವರಿದ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಅಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದರು.
ಈ ನಿರ್ಬಂಧ ಆದೇಶ ಇದ್ದರೂ ಅ.19ರಂದು ಕಾಂಗ್ರೆಸ್ ಕಾರ್ಯಕರ್ತರಾದ ಶುಭದ ರಾವ್, ದೀಕ್ಷಿತ್, ದೀಪಕ್, ಸುಬಿತ್, ವಿವೇಕಾನಂದ, ಯೋಗೀಶ, ಸೂರಜ್, ಪ್ರದೀಪ್, ಅಲ್ಪಾಜ್, ಐವಾನ್, ದಿವ್ಯಾ, ಕೃಷ್ಣ, ಹರೀಶ್ ಮತ್ತು ಇತರರು ಗುಂಪು ಗುಂಪಾಗಿ ಉಮಿಕಲ್ ಬೆಟ್ಟದ ಮೇಲೆ ಹೋಗಿದ್ದು, ಅಲ್ಲಿ ಪರಶುರಾಮ ವಿಗ್ರಹಕ್ಕೆ ಹೊದಿಸಿದ ರಕ್ಷಣಾ ಕವಚ ಮತ್ತು ಕಂಚಿನ ಮೂರ್ತಿಯ ಮೇಲಿದ್ದ ಫಿನಿಷಿಂಗ್ ಲೇಪನವನ್ನು ಹರಿದು ಹಾಕಿದ್ದಾರೆ. ಈ ಮೂಲಕ ಮೂರ್ತಿಯ ಮೂಲ ಸ್ವರೂಪವನ್ನು ವಿರೂಪಗೊಳಿಸಿ ಹಾನಿ ಮಾಡಿ ಸರಕಾರಕ್ಕೆ ನಷ್ಟವುಂಟುಮಾಡಿ, ಸುಳ್ಳು ಸುದ್ದಿಯನ್ನು ಹಬ್ಬಿಸಿರುವುದಾಗಿ ದೂರಲಾಗಿದೆ.