ಮೃತರ ಹೆಸರಿನಲ್ಲಿದ್ದ ಷೇರು ಮಾರಾಟ ಮಾಡಿ ವಂಚನೆ ಆರೋಪ: ಪ್ರಕರಣ ದಾಖಲು
ಉಡುಪಿ, ಸೆ.29: ಮೃತರ ಹೆಸರಿನಲ್ಲಿದ್ದ ಷೇರುಗಳನ್ನು ಮಾರಾಟ ಮಾಡಿ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮೆರಿಕಾದಲ್ಲಿ ನೆಲೆಸಿರುವ ಲಲಿತಾ ರಾವ್ ಅವರ ಪತಿ ಅಶೋಕ್ ಕಾರ್ಕಳದಲ್ಲಿ ವಾಸವಾಗಿದ್ದವರು. ಇವರು 2020ರ ಜು.13ರಂದು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕಾರ್ಕಳದಲ್ಲಿ ಮೃತಪಟ್ಟಿದ್ದರು. ಇವರ ಪತ್ನಿ ಮತ್ತು ಮಕ್ಕಳು ಕೋವಿಡ್ ಲಾಕ್‌ಡೌನ್‌ನಿಂದ ಮೃತರ ಅಂತ್ಯಸಂಸ್ಕಾರಕ್ಕೆ ಅಮೆರಿಕಾ ದಿಂದ ಕಾರ್ಕಳಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆ ಕಾರಣದಿಂದ ಅಶೊಕ್‌ರವರ ಅಂತಿಮ ಸಂಸ್ಕಾರವನ್ನು ಮೃತರ ಸಹೋದರನ ಮಗ ನವೀನ್ ನಡೆಸಿದ್ದರು.
ಅಶೋಕ್ ಜು.13ರಂದು ಮೃತಪಟ್ಟಿದ್ದರೂ ಮೃತರ ಅಣ್ಣ ಮೋಹನ್‌ರವರ ಮಗ ದಿನೇಶ್ ಎಂಬಾತನು 2020ರ ಜು.15ರಿಂದ ಆ.18ರ ಮಧ್ಯಾವಧಿ ಯಲ್ಲಿ ಮೃತ ಅಶೋಕ್ ಅವರಿಗೆ ಸೇರಿದ ವಿವಿಧ ಕಂಪೆನಿಗಳ ಸೇರಿದ ಒಟ್ಟು 4,24,90,548.90ರೂ. ಮೌಲ್ಯದ 14,970 ಷೇರುಗಳನ್ನು ಮೃತರ ಮೊಬೈಲ್ ಸಂಖ್ಯೆ ಮತ್ತು ಈ-ಮೇಲ್ ಐ.ಡಿ ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡಿರುವುದಾಗಿ ದೂರಲಾಗಿದೆ.
ಇವರು ಮೃತರ ಉತ್ತರದಾಯಿತ್ವ ಪ್ರಮಾಣ ಪತ್ರವನ್ನು ಸಂಬಂಧಿಸಿದ ನ್ಯಾಯಾಲಯದಿಂದ ಪಡೆಯದೆ ನಾಮ ನಿರ್ದೇಶನದ ಸುಳ್ಳು ದಾಖಲಾತಿ ಯನ್ನು ಸೃಷ್ಠಿಸಿ, ದಾಖಲಾತಿಯನ್ನು ನೈಜವಾದುದ್ದೆಂದು ಷೇರು ಬ್ರೋಕರ್ ಕಂಪೆನಿ ಮತ್ತು ಬ್ಯಾಂಕಿನ ಉದ್ಯೋಗಿಗಳೊಂದಿಗೆ ಶಾಮೀಲಾಗಿ, ಮೃತರ ಖಾತೆಯಿಂದ ತನ್ನ ಖಾತೆಗೆ ಹಣವನ್ನು ಜಮೆ ಮಾಡಿ ದ್ದಾರೆ. ಇದರಲ್ಲಿ 4160 ಷೇರುಗಳ ಮಾರಾಟದಿಂದ ಸಂಗ್ರಹವಾದ ಮೋಹನ್ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿ ಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.