ಬ್ರಹ್ಮಾವರ: ಲಂಚ ಸ್ವೀಕಾರ ಆರೋಪ; ಉಪ್ಪೂರು ಗ್ರಾ.ಪಂ ಪಿಡಿಓ, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ಬ್ರಹ್ಮಾವರ : ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ಉಪ್ಪೂರು ಗ್ರಾಮ ಪಂಚಾಯತ್ ಪಿಡಿಓ ಹಾಗೂ ಬಿಲ್ ಕಲೆಕ್ಟರ್‌ನನ್ನು ಉಡುಪಿ ಲೋಕಾಯುಕ್ತ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಉಪ್ಪೂರು ಗ್ರಾಪಂ ಪಿಡಿಓ ಇನಾಯತುಲ್ಲಾ ಬೇಗ್ ಹಾಗೂ ಬಿಲ್ ಕಲೆಕ್ಟರ್ ಸಂಜಯ್ ಬಂಧಿತ ಆರೋಪಿಗಳು. ಇವರು ರವಿ ಡಿಲಿಮಾ ಎಂಬವರಲ್ಲಿ ʼ9 ಆ್ಯಂಡ್ 11ʼ ಕೆಲಸಕ್ಕಾಗಿ 13,300ರೂ. ಲಂಚದ ಬೇಡಿಕೆಯೊಡ್ಡಿದ್ದರು. ಆದರೆ ಲಂಚ ನೀಡಲು ಒಪ್ಪದ ರವಿ ಈ ಬಗ್ಗೆ ಉಡುಪಿ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಅದರಂತೆ ಲೋಕಾಯುಕ್ತ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದರು. ಈ ಸಂಬಂಧ ರವಿ ಡಿಲಿಮಾ ಅವರಿಂದ 13,300ರೂ. ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಇನಾಯತ್ ಉಲ್ಲಾ ಬೇಗ್ ಹಾಗೂ ಸಂಜಯ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಎಸ್ಪಿ ನಟರಾಜ್ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ ಕೆ.ಸಿ.ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಮಂಜುನಾಥ್ ಹಾಗೂ ರಫೀಕ್ ಮತ್ತು ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ಪುಷ್ಪವತಿ , ರೋಹಿತ್, ಸತೀಶ್ ಹಂದಾಡಿ, ಮಲ್ಲಿಕಾ ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸತೀಶ್ ಆಚಾರ್ಯ,ಸುಧೀರ್, ರಾಘವೇಂದ್ರ ಪೂಜಾರಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.