ಅಮೆರಿಕದ ಸ್ಟಾನ್‌ಫೋಡ್ ವಿವಿ ವಿಶ್ವದ ವಿಜ್ಞಾನಿಗಳ ಪಟ್ಟಿ ಬಿಡುಗಡೆ: ಮಾಹೆ ವಿವಿಯ 20 ಪ್ರಾಧ್ಯಾಪಕರುಗಳಿಗೆ ಸ್ಥಾನ
ಉಡುಪಿ, ಅ.11: ಅಮೆರಿಕ ಸ್ಟಾನ್‌ಫೋರ್ಡ್ ವಿವಿ ಅತಿಹೆಚ್ಚು ಉಲ್ಲೇಖ ಪಡೆದ ವಿಶ್ವದ ವಿಜ್ಞಾನಿಗಳ ಹಾಗೂ ವಿಜ್ಞಾನ ಲೇಖಕರ ಹೆಸರು, ವಿವರಗಳಿರುವ ಡಾಟಾಬೇಸ್‌ನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದು, ಇದರಲ್ಲಿ ಮಣಿಪಾಲ ಮಾಹೆ ವಿವಿಗೆ ಸೇರಿದ ವಿವಿಧ ಶಿಕ್ಷಣ ಸಂಸ್ಥೆಗಳ 20 ಮಂದಿ ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.
ಪ್ರಾಧ್ಯಾಪಕರುಗಳ ಶಿಕ್ಷಣ ಹಾಗೂ ಅವರ ಸಂಶೋಧನಾ ಕಾರ್ಯದ ಹಿನ್ನೆಲೆಯಲ್ಲಿ ತಯಾರಿಸಲಾಗಿರುವ, ಸಾರ್ವಜನಿಕ ರಿಗೂ ಲಭ್ಯವಿರುವ ಈ ದತ್ತಾಂಶ ಸಂಚಯದಲ್ಲಿ ಮಣಿಪಾಲ ಕೆಎಂಸಿಯ ಇಬ್ಬರು, ಮಂಗಳೂರು ಕೆಎಂಸಿಯ ಏಳು ಮಂದಿ, ಮಣಪಾಲ ಎಂಐಟಿಯ ಆರು ಮಂದಿ ಹಾಗೂ ಇತರ ಶಿಕ್ಷಣ ಸಂಸ್ಥೆಗಳ ಐವರು ಪ್ರಾಧ್ಯಾಪಕರ ಹೆಸರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ಈ ದತ್ತಸಂಚಯದಲ್ಲಿ ಜಗತ್ತಿನ ಅಗ್ರಪಂಕ್ತಿಯ ಶೇ.2ರಷ್ಟು ವಿಜ್ಞಾನಿಗಳ ಹೆಸರಿದ್ದು, ಇವರಲ್ಲಿ ಮಾಹೆಯ 20 ಪ್ರಾಧ್ಯಾಪ ಕರು ಸೇರಿರುವುದು ಮಹತ್ತರ ಸಾಧನೆಯಾಗಿದೆ. ಅವರ ಸಮರ್ಪಣಾ ಮನೋಭಾವ, ವಿಷಯ ತಜ್ಞತೆ, ಅಧ್ಯಯನ ಮೇಲಿನ ಆಸಕ್ತಿ ಮಾಹೆಯ ಸಂಶೋಧನಾ ಗುಣಮಟ್ಟವನ್ನು ಎತ್ತಿ ಹಿಡಿದಿದೆ ಎಂದು ಮಾಹೆಯ ಕುಲಪತಿ ಲೆ.ಜ. ಡಾ.ಎಂ.ಡಿ.ವೆಂಕಟೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸ್ಟಾನ್‌ಫೋರ್ಡ್ ವಿವಿಯ ವಿಜ್ಞಾನಿ ಪ್ರೊ.ಜಾನ್ ಪಿ.ಎ.ಲೋನಿಡೈಸ್ ಅವರು ಈ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ವಿಶ್ವದ ಸುಮಾರು ಒಂದು ಲಕ್ಷ ವಿಜ್ಞಾನಿಗಳ 2022ನೇ ಸಾಲಿನ ಸಾಧನೆಯನ್ನು ಪರಿಗಣಿಸಿ 22 ವೈಜ್ಞಾನಿಕ ಕ್ಷೇತ್ರ ಹಾಗೂ 174 ಉಪಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯನ್ನು ಅ.1ರಂದು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಜಗತ್ತಿನ ಶೇ.2ರಷ್ಟು ವಿಜ್ಞಾನಿಗಳಿದ್ದಾರೆ.
ಪಟ್ಟಿಯಲ್ಲಿ ಸ್ಥಾನ ಪಡೆದ ಮಾಹೆಯ ಪ್ರಾಧ್ಯಾಪಕರಲ್ಲಿ ಮಂಗಳೂರು ಕೆಎಸಿಯ ಡೀನ್ ಡಾ.ಬಿ.ಉನ್ನಿಕೃಷ್ಣನ್ ಸತತ ಎರಡನೇ ಬಾರಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಈ ಬಾರಿ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಸಹ ಪ್ರಾಧ್ಯಾಪಕ ರಮೇಶ್ ಹೊಳ್ಳ, ನಿತಿನ್ ಕುಮಾರ್, ಹೆಚ್ಚುವರಿ ಪ್ರಾಧ್ಯಾಪಕ ಪ್ರಸನ್ನ ಮಿತ್ರ, ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಪ್ರತೀಕ್ ರಸ್ತೋಗಿ, ಸಹ ಪ್ರಾಧ್ಯಾಪಕ ಜಗದೀಶ್ ರಾವ್ ಸೇರಿದ್ದಾರೆ.
ಕೆಎಂಸಿ ಮಣಿಪಾಲದ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಡಾ.ವಿನೋದ್ ಸಿ. ನಾಯಕ್, ಹೆಚ್ಚುವರಿ ಪ್ರಾಧ್ಯಾಪಿಕೆ ಡಾ.ಚೈತ್ರಾ ಕೆ.ರಾವ್, ಮಣಿಪಾಲ ಎಂಐಟಿಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಡಾ.ರಾಜಾ ಸೆಲ್ವರಾಜ್, ಐ ಎಂಡ್ ಸಿ ಇಂಜಿನಿಯರಿಂಗ್ ವಿಭಾಗದ ಡಾ.ರಾಘವೇಂದ್ರ ಯು., ಮೆಕ್ಯಾನಿಕಲ್ ಇಂಜಿನಿಯರಿಂಗ್‌ನ ಶಿವಕುಮಾರ್, ಸಹ ಪ್ರಾಧ್ಯಾಪಕ ನಿತೇಶ್ ನಾಯಕ್, ಇ ಎಂಡ್ ಸಿಯ ತನ್ವೀರ್ ಅಲಿ ಸೇರಿದ್ದಾರೆ.
ಉಳಿದಂತೆ ಔಷಧ ವಿಜ್ಞಾನ ವಿಭಾಗದ ಡಾ.ಶ್ರೀನಿವಾಸ ಮುತಾಲಿಕ್, ಡಾ. ಉಷಾ ವೈ.ನಾಯಕ್, ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ ಡಾ.ಶಶಿಧರ ಆಚಾರ್ಯ, ಬೇಸಿಕ್ ಮೆಡಿಸಿನ್ ವಿಜ್ಞಾನ ವಿಭಾಗದ ಡಾ.ಸತೀಶ್ ನಾಯಕ್, ಮಣಿಪಾಲ ಹೆಲ್ತ್ ಸಾಯನ್ಸ್‌ನ ಜೀವ ಭೌತ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಡಾ.ನಿರ್ಮಲ್ ಮುಜುಂದಾರ್ ಹೆಸರು ಪಟ್ಟಿಯಲ್ಲಿದೆ.