ಯಾವುದೇ ಕಾರಣಕ್ಕೂ ಎಪಿಎಲ್, ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ: ಸಚಿವ ಮುನಿಯಪ್ಪ
ಕುಂದಾಪುರ, ನ.17: ಯಾವುದೇ ಕಾರಣಕ್ಕೂ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ. ಎಲ್ಲವೂ ಸುಳ್ಳು ಮಾಹಿತಿ ಆಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.
ಕುಂದಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 1 ಕೋಟಿ 26 ಲಕ್ಷ ಬಿಪಿಎಲ್ ಕಾರ್ಡುಗಳಿಗೆ ಪಡಿತರ ನೀಡುತ್ತಿದ್ದೇವೆ. ನಮ್ಮಲ್ಲಿ ಶೇ.75-80ರಷ್ಟು ಬಿಪಿಎಲ್ ಕಾರ್ಡ್‌ಗಳಿದ್ದರೆ, ದಕ್ಷಿಣ ಭಾರತದ ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಕೇವಲ ಶೇ.50 ಮಾತ್ರ ಇದೆ. ಹಾಗಾಗಿ ಪರಿಷ್ಕರಣೆ ಕಾರ್ಯ ಆರಂಭಿಸಿದ್ದೇವೆ ಎಂದರು.
ಆದಾಯ ತೆರಿಗೆ ಪಾವತಿದಾರರು ಮತ್ತು ಕಾರು ಹೊಂದಿರುವ ಅನುಕೂಲರಸ್ಥರನ್ನು ಪರಿಶೀಲನೆ ನಡೆಸಿ, ಅನರ್ಹರನ್ನು ಬಿಪಿಎಲ್ ಪಟ್ಟಿಯಿಂದ ಎಪಿಎಲ್‌ಗೆ ವರ್ಗಾಯಿಸಲಾಗುವುದು. ಅವರ ಎಪಿಎಲ್ ಕಾರ್ಡ್ ಕೂಡ ರದ್ದು ಮಾಡುವುದಿಲ್ಲ. ಇದರಿಂದ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ ಎಂದು ಅವರು ತಿಳಿಸಿದರು.
ಕಳೆದ ತಿಂಗಳು ಇದ್ದ ಸರ್ವರ್ ಸಮಸ್ಯೆಯನ್ನು ಇದೀಗ ಸಂಪೂರ್ಣ ಸರಿಪಡಿಸಲಾಗಿದೆ. ಈಗ ಎಲ್ಲೂ ಸರ್ವರ್ ಸಮಸ್ಯೆಗಳಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ವೈದ್ಯಕೀಯಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸಿದವರಿಗೆ ಒಂದೇ ವಾರದಲ್ಲಿ ಕಾರ್ಡ್ ನೀಡಲಾಗುವುದು ಎಂದು ಸಚಿವರು ಹೇಳಿದರು.