ಎರಡು ಕಿರುಸೇತುವೆಗಾಗಿ ಉಡುಪಿ ಜಿಲ್ಲಾಧಿಕಾರಿಗೆ ಮನವಿ
ಉಡುಪಿ, ಆ.23: ಹಾವಂಜೆ ಗ್ರಾಮದ ಕೀಳಂಜೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಎರಡು ಕಡೆಗಳಲ್ಲಿ ಕಿರು ಸೇತುವೆ (ಕಾಲುಸಂಕ)ಗಳನ್ನು ನಿರ್ಮಿಸುವಂತೆ ಅಲ್ಲಿನ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೀಳಂಜೆಯ ಸುತ್ತಮುತ್ತಲಿನ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಕೃಷಿ ಯಂತ್ರೋಪಕರಣ, ಗೊಬ್ಬರ ತುಂಬಿದ ವಾಹನಗಳು, ಉಳುವ ಯಂತ್ರ, ಟ್ರ್ಯಾಕ್ಟರ್ ಸಾಗಾಟಕ್ಕೆ ಅನುಕೂಲವಾಗು ವಂತೆ, ನಾಟಿ ಹಾಗೂ ಕಟಾವು ಯಂತ್ರಗಳನ್ನು ಗದ್ದೆ ಬಳಿ ತರಲು ಎರಡು ಕಡೆ ಕಿರುಸೇತುವೆಗಳ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇಲ್ಲಿನ ಸಾಧು ಪೂಜಾರಿ ಹಾಗೂ ವನಜ ಶೆಟ್ಟಿ ಎಂಬವರಿಗೆ ಸೇರಿದ ಜಾಗದ ಬಳಿ ಈ ಕಾಲುಸಂಕಗಳನ್ನು ನಿರ್ಮಿಸಿದರೆ ಪರಿಸರದ ರೈತರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೀಳಂಜೆಯ ಕೃಷಿಕರಾದ ಸುಧಾಕರ ಪೂಜಾರಿ ಕೀಳಂಜೆ, ಕಾಂಗ್ರೆಸ್ನ ಹಿರಿಯ ಮುಖಂಡ ಜಯ ಶೆಟ್ಟಿ ಬನ್ನಂಜೆ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶರಾಜ್ ಸರಳೆಬೆಟ್ಟು ಅವರು ಈ ಕುರಿತು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಿದರು.