ತುಳುಭಾಷೆಗೆ ಸ್ಥಾನಮಾನಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಾರೈಕೆ
ಹಿಮಂತ ಬಿಸ್ವಾ ಶರ್ಮಾ
ಉಡುಪಿ, ಆ.9: ಜೈ ತುಲುನಾಡ್ ಸಂಘಟನೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆ ಗೊಳಿಸಿದ ‘ತುಲುಪುರ್ಪ’ ಕವನ ಸಂಕಲನ ಕೃತಿಯನ್ನು ಶ್ಲಾಘಿಸಿ ಅಸ್ಸಾಂ ಮುಖ್ಯಮಂತ್ರಿ ಡಿ.ಹಿಮಂತ ಬಿಸ್ವಾ ಶರ್ಮಾ ಸಂಘಟನೆಯ ಅಧ್ಯಕ್ಷರಿಗೆ ಪತ್ರವನ್ನು ಬರೆದಿದ್ದಾರೆ.
ದೇಶದಾದ್ಯಂತ ತುಳು ಭಾಷೆಯನ್ನು ಪರಿಚಯಿಸುವ ಹಾಗೂ ಭಾಷೆಗೆ ಮಾನ್ಯತೆಯನ್ನು ದೊರಕಿಸಿಕೊಡುವಲ್ಲಿ ಸಹಕಾರ ವನ್ನು ಕೋರಿ ಈ ಕೃತಿಯನ್ನು ಪ್ರಧಾನಿ, ರಾಷ್ಟ್ರಪತಿ ಹಾಗೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾ ಗಿದ್ದು, ಇದೀಗ ಈ ಕೃತಿ ಸ್ವೀಕರಿಸಿದ ಅಸ್ಸಾಂ ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆಯು ಬಂದಿದೆ.
ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಹಲವು ಭಾಷೆಗಳಿವೆ. ಪಂಚ ಮಹಾದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯೂ ಒಂದು. ನಮ್ಮ ಐಕ್ಯತೆಯನ್ನು ಸಧೃಡಗೊಳಿಸುವಲ್ಲಿ ಭಾಷೆಗಳು ಆಧಾರ ಸ್ತಂಭಗಳಾಗಿವೆ. ತುಳು ಭಾಷೆಗೆ ಮಾನ್ಯತೆ ದೊರೆಯಬೇಕು. ಈ ನಿಟ್ಟಿನಲ್ಲಿ ಜೈ ತುಲುನಾಡ್ ಸಂಘಟನೆ ಕಾರ್ಯ ಶ್ಲಾಘನೀಯವೆಂದು ಪ್ರತಿಕ್ರಿಯಿಸಿರುವು ದಾಗಿ ಎಂದು ಸಂಘಟನೆಯು ತಿಳಿಸಿದೆ. ಇದಕ್ಕೆ ಸಂಘಟನೆಯು ಅಸ್ಸಾಂ ಮುಖ್ಯಮಂತ್ರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.
ತುಳು ಭಾಷೆಯು ತುಳುನಾಡಿನಲ್ಲಿ ಅಧಿಕೃತ ಪ್ರಾದೇಶಿಕ ಭಾಷೆಯಾಗಬೇಕು. ತುಳುವರು ತಮ್ಮ ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡುವಂತಾಗಬೇಕು. ತುಳು ಭಾಷೆಗೆ ನಮ್ಮ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನಮಾನವು ಲಭಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಜೈ ತುಲುನಾಡ್ ಸಂಘಟನೆಯು ತುಳುನಾಡಿನ 111ಕವಿಗಳು ಬರೆದ ತುಳು ದೇಶಭಕ್ತಿ ಗೀತೆ, ತುಳುನಾಡ ಗೀತೆಗಳನ್ನು ಸಂಗ್ರಹಿಸಿ ಅದನ್ನು ತುಲುಲಿಪಿಯಲ್ಲಿ ಮುದ್ರಿಸಿ, ’ತುಲು ಪುರ್ಪ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿತ್ತು.
ಈ ಕೃತಿಗೆ ಕರ್ನಾಟಕ ತುಲು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ತುಳುನಾಡಿನ ಅಲುಪ ವಂಶಸ್ಥ ಡಾ.ಆಕಾಶ್ರಾಜ್ ಜೈನ್ ಮುನ್ನುಡಿ ಬರೆದಿದ್ದು, ಬೆನ್ನುಡಿಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಬರೆದಿದ್ದಾರೆ. ಕೃತಿಯ ತಿರುಳನ್ನು ದೇಶ ದಾದ್ಯಂತ ಎಲ್ಲರಿಗೂ ತಿಳಿದುಕೊಳ್ಳಲು ಸಹಕಾರಿಯಾಗುವಂತೆ ಇಂಗ್ಲಿಷ್, ಹಿಂದಿ, ಕನ್ನಡ, ತುಳು ಭಾಷೆಗಳಲ್ಲಿ ಕೃತಿಯನ್ನು ಮುದ್ರಿಸಿರುವುದು ವಿಶೇಷತೆಯಾಗಿದೆ.