ಬಾರಕೂರು ಶ್ರೀಕಾಳಿಕಾಂಬ ದೇವಳದ ಮೊಕ್ತೇಸರ ಆಯ್ಕೆ ವಿಚಾರದಲ್ಲಿ ಹಲ್ಲೆ: ದೂರು-ಪ್ರತಿದೂರು ದಾಖಲು
ಕುಂದಾಪುರ, ಡಿ.27: ಬಾರಕೂರಿನ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ನಡೆದ ಮೂರನೇ ಮೊಕ್ತೇಸರರ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಹಲ್ಲೆಗೈದು ಜೀವಬೆದರಿಕೆಯೊಡ್ಡಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ.
ಬಾರಕೂರಿನ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಡಿ.25ರಂದು ನಡೆದ ಮೂರನೇ ಮೊಕ್ತೇಸರರ ಆಯ್ಕೆಯ ಬಗ್ಗೆ ಮಹಾಸಭೆಗೆ ಹೋಗಿದ್ದ ಕೋಟೇಶ್ವರದ ರತೀಶ್(37) ಎಂಬವರಿಗೆ ಕೃಷ್ಣಯ್ಯ ಎಂಬವರು 'ನೀನೇನು 500 ರೂ. ಆಸೆಗೆ ಅವರಿಗೆ ಬೆಂಬಲ ನೀಡಲು ಬಂದಿದ್ದೀಯಾ' ಎಂದು ಪ್ರಶ್ನಿಸಿದ್ದಾರೆನ್ನಲಾಗಿದೆ. ಬಳಿಕ ಇದೇ ವಿಚಾರವಾಗಿ ಕೃಷ್ಣಯ್ಯರ ಪುತ್ರ ಶರತ್ ಗೆ ರತೀಶ್ ಪೋನ್ ಮಾಡಿ ವಿಚಾರಿಸಿದ್ದಾರೆ. ಆಗ ಶರತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅರ್ಚನಾ ಬಾರ್ ಎದುರು ಬಂದು ಅಲ್ಲಿದ್ದ ರತೀಶ್ ರಿಗೆ ರೇಸರ್ ನಲ್ಲಿ ಇರಿದು ಕೈಗೆ ಗಾಯಗೊಳಿಸಿದ್ದಾನೆ ಎಂದು ದೂರಲಾಗಿದೆ.
ಪ್ರತಿದೂರು: ಗೋಪಾಡಿ ಗ್ರಾಮದ ಶ್ರೀಧರ(41) ಎಂಬವರು ಬಾರ್ಕೂರಿನ ಶ್ರೀಕಾಳಿಕಾಂಬ ದೇವಸ್ಥಾನದ ಮೊಕ್ತೇಸರರ ಆಯ್ಕೆಯ ಕಾರ್ಯಕ್ರಮಕ್ಕೆ ಮಾವ ಕೃಷ್ಣಯ್ಯರೊಂದಿಗೆ ಹೋಗಿದ್ದು, ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ರತೀಶ್, ಕೃಷ್ಣಯ್ಯರಿಗೆ ಪೋನ್ ಮಾಡಿ ನಿಂದಿಸಿ, ಅರ್ಚನಾ ಬಾರ್ ಬಳಿ ಬರಲು ಹೇಳಿದ್ದರೆನ್ನಲಾಗಿದೆ. ಅದರಂತೆ ಕೃಷ್ಣಯ್ಯ ಬಾರ್ ಬಳಿಗೆ ಹೋದಾಗ ರತೀಶ್ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ತಡೆಯಲು ಯತ್ನಿಸಿದ ಶ್ರೀಧರ್ ಹಾಗೂ ಶರತ್ ರಿಗೆ ರತೀಶ್ ಹೊಡೆದರೆನ್ನಲಾಗಿದೆ. ರಾಘವೇಂದ್ರ ಜಾಡು ಎಂಬಾತ ಕಲ್ಲಿನಿಂದ ಕೃಷ್ಣಯ್ಯರಿಗೆ ಹಲ್ಲೆಗೆ ಮುಂದಾದಾಗ ತಡೆದ ಶ್ರೀಧರ್ ಅವರಿಗೆ ಕಲ್ಲಿನಿಂದ ಎದೆಗೆ ಗುದ್ದಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.