ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗೆ ಹಲ್ಲೆಗೆ ಯತ್ನ: ಪ್ರಕರಣ ದಾಖಲು
ಬೈಂದೂರು, ಸೆ.23: ವಿದ್ಯುತ್ ಬಿಲ್ ಬಾಕಿಯ ಕಾರಣಕ್ಕಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಮೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಸೆ.22ರಂದು ಸಂಜೆ ಹಾಲಂಬೇರು ಎಂಬಲ್ಲಿ ನಡೆದಿದೆ.
ಹಾಲಂಬೇರಿನ ನಾಗರಾಜ ಎಂಬವರ ಮನೆಯ ವಿದ್ಯುತ್ ಬಿಲ್ ಬಾಕಿ ಇರುವ ಕಾರಣ ಅವರ ಮನೆಯ ವಿದ್ಯುತ್ ಸಂಪರ್ಕವನ್ನು ಬೈಂದೂರು ಮೆಸ್ಕಾಂ ಶಾಖೆಯ ಪವರ್‌ಮೆನ್ ಮಸೂದ್ (48) ಎಂಬವರು ಸೆ.21ರಂದು ನಿಲುಗಡೆ ಗೊಳಿಸಿದ್ದರು. ಸೆ.22ರಂದು ನಾಗರಾಜ ಬಾಕಿ ಮೊತ್ತ ಪಾವತಿ ಮಾಡಿರುವುದಾಗಿ ತಿಳಿಸಿ ವಿದ್ಯುತ್ ಮರು ಸಂಪರ್ಕ ಕೊಡುವಂತೆ ಮಸೂದ್‌ಗೆ ಕರೆ ಮಾಡಿ ತಿಳಿಸಿದ್ದು, ಅದರಂತೆ ಅವರು ಸಂಜೆ ನಾಗರಾಜ ಮನೆಯ ಹತ್ತಿರ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ನಾಗರಾಜ ರಸ್ತೆ ಮಧ್ಯೆ ಗಾಜಿನ ಬಾಟಲಿಗಳನ್ನು ಒಡೆದು ಹಾಕಿ ಕೈಯಲ್ಲಿ ಕತ್ತಿಯನ್ನು ಹಿಡಿದು ಕೊಂಡು ಮಸೂದ್ ಮತ್ತು ಶಾಖಾಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದರು. ಅಲ್ಲದೆ ಮಸೂದ್ ಬೈಕಿನ ಕನ್ನಡಿಗೆ ಹಾನಿಗೊಳಿಸಿ, ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.