ಹಾಲು ಉತ್ಪಾದನೆ ಹೆಚ್ಚಳಕ್ಕೆ ಗಮನ ಅಗತ್ಯ: ದೇವಿಪ್ರಸಾದ್ ಶೆಟ್ಟಿ
ಉಡುಪಿ, ಆ.26: ಬೇರೆ ಒಕ್ಕೂಟಗಳಿಂದ ಕಡಿಮೆ ದರದಲ್ಲಿ ಹಾಲು ತಂದು ಮಾರಿ ಗಳಿಸುವ ಲಾಭಕ್ಕಿಂತ ಸ್ಥಳೀಯವಾಗಿ ಹಾಲು ಉತ್ಪಾದನೆ ಹೆಚ್ಚಳ, ಹೈನುಗಾರರ ಅಭಿವೃದ್ಧಿಗೆ ಉತ್ತೇಜನದ ಯೋಜನೆ ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ವತಿ ಯಿಂದ ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಲಿಕೋ ಬ್ಯಾಂಕಿನ ಡೈಮಂಡ್ ಜ್ಯುಬಿಲಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರ, ಹೈನುಗಾರಿಕೆ ಸಂಕಷ್ಟ, ಶ್ರಮದ ಹಿನ್ನೆಲೆಯಲ್ಲಿ ಕಡಿಮೆಯಾದ ಹಾಲು ಉತ್ಪಾದನೆ ಜತೆಗೆ ದರವೂ ಹೆಚ್ಚ ಬೇಕು. ಖರ್ಚು ಕಡಿತಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳು ಮತತಿಷ್ಟು ಬೆಳವಣಿಗೆ ಹೊಂದಿ ಲಾಭದಾಯಕವಾಗಲು ಪಡಿತರ ವಿತರಣೆ, ಬ್ಯಾಂಕಿಂಗ್, ಕೃಷಿ ಪರಿಕರ ಮಾರಾಟ ಸಹಿತ ಅವಕಾಶಗಳ ಸದ್ಭಳಕೆ ಮಾಡಬೇಕು ಎಂದರು.
ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ರವಿರಾಜ್ ಹೆಗ್ಡೆ , ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಮಾತನಾಡಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.
ಸಹಕಾರ ಸಂಘಗಳ ಉಪನಿಬಂಧಕ ಕೆ.ಆರ್. ಲಾವಣ್ಯ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪ ನಿರ್ದೇಶಕ ರೇಣುಕಾ ಜಿ., ಸಹಕಾರ ಸಂಘಗಳ ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕ ಸುಕನ್ಯಾ, ಸಹಕಾರ ಸಂಘಗಳ ನಿವೃತತಿ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಎಚ್.ಗಂಗಾಧರ ಶೆಟ್ಟಿ, ಹರೀಶ್ ಕಿಣಿ ಅಲೆವೂರು, ಕೆ.ಸುರೇಶ್ ರಾವ್, ಮನೋಜ್ ಎಸ್. ಕರ್ಕೇರ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.