ಅರಬಿಸಮುದ್ರದಲ್ಲಿ ವಾಯುಭಾರ ಕುಸಿತ; ಚಂಡಮಾರುತದ ಭೀತಿ: ಉಡುಪಿ ಡಿಸಿ ಡಾ. ವಿದ್ಯಾಕುಮಾರಿ
4 ದಿನ ಸಮುದ್ರಕ್ಕಿಳಿಯದಂತೆ ಎಲ್ಲರಿಗೂ ಎಚ್ಚರಿಕೆ
ಡಾ.ಕೆ. ವಿದ್ಯಾಕುಮಾರಿ
ಉಡುಪಿ, ಅ.16: ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಸಮುದ್ರದಲ್ಲಿ ಚಂಡಮಾರುತ ಬೀಸುವ ಸಂಭವವಿದೆ ಎಂದು ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರಿಂದಾಗಿ ಸಮುದ್ರದ ಅಲೆಗಳ ಎತ್ತರ ಹೆಚ್ಚಾಗಲಿದ್ದು, ಗಾಳಿಯ ವೇಗವು ಗಂಟೆಗೆ 40-45ರಿಂದ 55ಕಿ.ಮೀ. ಇರುವುದರಿಂದ ಸಮುದ್ರ ಪ್ರಕ್ಷುಬ್ಧಗೊಳ್ಳಲಿದೆ. ಹೀಗಾಗಿ ಮುಂದಿನ ನಾಲ್ಕು ದಿನಗಳ ಕಾಲ (ಅ.20ರವರೆಗೆ) ಕರಾವಳಿ ಸಮುದ್ರದ ತೀರದಲ್ಲಿ ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು, ಸ್ಥಳೀಯರು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸಮುದ್ರ ತೀರದಲ್ಲಿ ಓಡಾಡುವುದು ಹಾಗೂ ಆಟವಾಡುವುದನ್ನು ಕೂಡಾ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ತುರ್ತು ಸಂದರ್ಭದಲ್ಲಿ ಸೇವೆಗಾಗಿ ಶುಲ್ಕ ರಹಿತ:1077 ಅಥವಾ ದೂರವಾಣಿ ಸಂಖ್ಯೆ:0820-2574802ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.