ಕೊರಗರಿಗೆ ಭೂಮಿ ಹಬ್ಬವೇ ನಿಜವಾದ ಸ್ವಾತಂತ್ರ್ಯೋತ್ಸವ: ಡಾ.ಸಬಿತಾ
ಉಡುಪಿಯಲ್ಲಿ ಕೊರಗ ಒಕ್ಕೂಟದಿಂದ 15ನೇ ವರ್ಷದ ಭೂಮಿ ಹಬ್ಬ
ಉಡುಪಿ, ಆ.18: ಕೊರಗರಿಗೆ ಭೂಮಿ ಹಬ್ಬವೇ ನಿಜವಾದ ಸ್ವಾತಂತ್ರ್ಯೋತ್ಸವ. ಕೀಳರಿಮೆ, ದೌರ್ಜನ್ಯ, ಶೋಷಣೆ, ಕೀಳಾಗಿ ಕಂಡ ಸಮಾಜ ದಿಂದ ಬಿಡುಗಡೆಗೊಂಡು ಹೊರ ಬಂದಿರುವುದೇ ಕೊರಗರಿಗೆ ಸಿಕ್ಕಿರುವ ನಿಜವಾದ ಸ್ವಾತಂತ್ರ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಬಿತಾ ಗುಂಡ್ಮಿ ಹೇಳಿದ್ದಾರೆ.
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಇದರ ವತಿಯಿಂದ ಶುಕ್ರವಾರ ಉಡುಪಿ ಪುತ್ತೂರಿನ ಆದಿವಾಸಿ ಸಭಾಭವನದ ಆವರಣದಲ್ಲಿ ಹಮ್ಮಿಕೊಳ್ಳಲಾದ 15ನೇ ವರ್ಷದ ಭೂಮಿ ಹಬ್ಬದಲ್ಲಿ ಅವರು ಹಬ್ಬದ ಸಂದೇಶ ನೀಡಿದರು.
ಹೊರರಾಜ್ಯದ ಬುಡಕಟ್ಟು ಸಮುದಾಯಗಳು ಈಗ ಅನುಭವಿಸುತ್ತಿರುವ ಜೀತಪದ್ಧತಿಯನ್ನು ನಾವು 20ವರ್ಷಗಳ ಹಿಂದೆಯೇ ಇಲ್ಲಿ ಅನುಭವಿಸಿದ್ದೇವೆ. ಕೆಲವರ ಮುಷ್ಠಿಯಿಂದ ಹೊರಗೆ ಬರಲು ಸಾಕಾಷ್ಟು ಶ್ರಮಿಸಿದ್ದೇವೆ. ಈ ಎಲ್ಲ ದೌರ್ಜನ್ಯ ಗಳಿಂದ ಹೊರಗಡೆ ಬಂದು ಶೋಷಣೆಯ ಸಮಾಜವನ್ನು ಮೆಟ್ಟಿನಿಂತು ಶಿಕ್ಷಣ ಪಡೆದು ಇಂದು ಭೂಮಿ ಹಬ್ಬವನ್ನು ಆಚರಿಸುವ ಮಟ್ಟಕ್ಕೆ ಬೆಳೆದಿದ್ದೇವೆ ಎಂದರು.
ಶಿಕ್ಷಣವೇ ಕೊರಗ ಸಮುದಾಯದ ನಿಜವಾದ ಬಲ. ಆದುದರಿಂದ ವಿದ್ಯಾರ್ಥಿಗಳು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಇತರ ಬುಡಕಟ್ಟು ಸಮುದಾಯಕ್ಕೆ ಹೋಲಿಕೆ ಮಾಡಿದರೆ ಕೊರಗ ಸಮುದಾಯದ ಮಕ್ಕಳು ಹೆಚ್ಚು ಶಿಕ್ಷಣ ಪಡೆದಿದ್ದಾರೆ. ಶಿಕ್ಷಣದಿಂದ ನಮ್ಮ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಭೂಮಿ ಹಬ್ಬವು ಶಿಕ್ಷಣ ಕ್ರಾಂತಿಗೆ ನಾಂದಿಯಾಗ ಬೇಕು. ಕೇವಲ ಸರಕಾರದ ಸೌಲಭ್ಯಗಳನ್ನೇ ಅವಲಂಬಿಸದೆ ಸಮುದಾಯವು ಶೈಕ್ಷಣಿಕ ಕ್ರಾಂತಿ ಮೂಡಿಸಿ ಪ್ರಗತಿ ಸಾಧಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕೊರಗರು ಅರಣ್ಯದ ಜೊತೆ ಬದುಕು ಕಟ್ಟಿಕೊಂಡವರು. ಸರಕಾರ ಗಳು ಬಹಳಷ್ಟು ಕಾರ್ಯಕ್ರಮಗಳ ಮೂಲಕ ಕೊರಗ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸುತ್ತಿದೆ. ಸರಕಾರದ ಯೋಜನೆಗಳನ್ನು ಕೊರಗರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕೊರಗ ಸಂಘಟನೆಗಳು ಇಲಾಖಾಧಿಕಾರಿಗಳ ಜೊತೆ ಕೈಜೋಡಿಸುವುದು ಅತೀ ಅಗತ್ಯ ವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಸುಶೀಲ ನಾಡ ವಹಿಸಿದ್ದರು. ಧ್ವಜಾ ರೋಹಣವನ್ನು ಕಾಸರಗೋಡು ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ವರ್ಕಾಡಿ ಐತಪ್ಪ ನೆರವೇರಿಸಿದರು. ಈ ಸಂದರ್ಭದಲ್ಲಿ ಭೂಮಿ ಹೋರಾಟದ ನಿರ್ಣಾಯಕ ಹಂತ 2000ನೇ ಇಸವಿಯ ಕಳ್ತೂರು ಚಳವಳಿಯಲ್ಲಿ ಪಾಲ್ಗೊಂಡವರನ್ನು ಅಭಿನಂದಿಸ ಲಾಯಿತು.
ಒಕ್ಕೂಟದ ನಮ್ಮ ನ್ಯಾಯಕೂಟದ ನ್ಯಾಯಾಧೀಶ ಬಾಲರಾಜ್ ಕೋಡಿಕಲ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ದೂದ್ ಪೀರ್, ಪೆರ್ನಾಲು ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಶೆಟ್ಟಿ, ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಬೊಗ್ರ ಕೊರಗ, ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ ವಿ. ಮುಖ್ಯ ಅತಿಥಿಗಳಾಗಿದ್ದರು.
ಪ್ರಮುಖರಾದ ಮತ್ತಾಡಿ ಕಾಯರ್‌ಪಲ್ಕೆ, ಮೋಹನ್ ಅಡ್ವೆ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನಯ ಅಡ್ವೆ ಉಪಸ್ಥಿತರಿ ದ್ದರು. ಹಬ್ಬದ ದೀಪವನ್ನು ಸುಶೀಲಾ ಕಿನ್ನಿಗೋಳಿ ಬೆಳಗಿಸಿದರು. ಹಬ್ಬದ ಸವಿಜೇನನ್ನು ಗೌರಿ ಕೊಕ್ಕರ್ಣೆ ಹಂಚಿಸಿದರು. ಒಕ್ಕೂಟದ ಸಂಯೋಜಕ ಕೆ.ಪುತ್ರನ್ ಹೆಬ್ರಿ ಸ್ವಾಗತಿಸಿದರು. ಶೇಖರ್ ಕಡಾರಿ ವಂದಿಸಿದರು. ವಿಮಲಾ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು.
ಭೂಮಿ ಹಬ್ಬದ ಜಾಥಾಕ್ಕೆ ಉಡುಪಿ ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು.
ಅಲ್ಲಿಂದ ಹೊರಟ ಜಾಥವು ಕರಾವಳಿ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ನಿಟ್ಟೂರು ಆದಿವಾಸಿ ಭವನ ದಲ್ಲಿ ಸಮಾಪ್ತಿಗೊಂಡಿತು. ಜಾಥದಲ್ಲಿ ಕೊರಗ ಸಮುದಾಯದ ವಿವಿಧ ಕಲಾ ತಂಡಗಳ ಡೋಲು, ಚಂಡೆ, ಕೊಳಲು ವಾದನ ಹಾಗೂ ಡೋಲು ಕುಣಿತ ವಿಶೇಷ ಆಕರ್ಷಣೀಯವಾಗಿತ್ತು.