ಬಿಜೆಪಿಗೆ ದಲಿತರ ಬಗ್ಗೆ ಕೀಳು ಮನಸ್ಥಿತಿ: ಜಯರಾಮ್ ನಾಯ್ಕ್
ಉಡುಪಿ : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಕುರಿತು ಮಾಜಿ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಅವಹೇಳನಕಾರಿ ಹೇಳಿಕೆಯು ಬಿಜೆಪಿಯವರಿಗೆ ದಲಿತರ ಬಗ್ಗೆ ಇರುವ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಜಯರಾಮ್ ನಾಯ್ಕ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರು ಕೇವಲ ಓಟು ಬ್ಯಾಂಕಿಗಾಗಿ ಸೀಮಿತ ಆಗಿರಬೇಕು ಎಂಬ ಮನಸ್ಥಿತಿ ಬಿಜೆಪಿಯವರದ್ದಾಗಿದೆ. ಜಾತಿಗಳನ್ನು ಎತ್ತಿಕಟ್ಟುವುದು ಬಿಜೆಪಿಯ ಹಿಡನ್ ಅಜೆಂಡವಾಗಿದೆ. ದಲಿತರ ರಾಜಕೀಯ ಏಳಿಗೆ ಬಗ್ಗೆ ತೀವ್ರ ಅಸಹನೆ ಹೊಂದಿ ರುವ ಬಿಜೆಪಿಯಿಂದ ಇಂತಹ ಹೇಳಿಕೆಗಳು ಹೊರಬರುತ್ತಿವೆ. ಮುಂದಿನ ಲೋಕ ಸಭೆ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಯಿಂದ ವಿಚಲಿತರಾಗಿರುವ ಬಿಜೆಪಿ ಯವರು ದಲಿತರಲ್ಲಿ ಗೊಂದಲ ಮೂಡಿಸಿ ಎತ್ತಿ ಕಟ್ಟುವ ಕೀಳುಮಟ್ಟದ ರಾಜಕೀಯದಲ್ಲಿ ತೊಡಗಿದೆ. ಹಿಂದಿನ ಬಿಜೆಪಿ ಸರಕಾರ ಮೀಸಲಾತಿ ಹೆಚ್ಚಿಸುವ ಬಗ್ಗೆ ಗೊಂದಲ ಸೃಷ್ಠಿಸಿ, ಪರಿಶಿಷ್ಟ ಪಂಗಡದವರ ಮೀಸಲಾತಿಯನ್ನು ಏರಿಸುವ ಆಶ್ವಾಸನೆ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿ ಸದೆ ದ್ರೋಹ ಬಗೆದಿದೆ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಯ ಕುಮಾರ್, ಪ್ರಧಾನ ಕಾರ್ಯದರ್ಶಿ ದಿನೇಶ್, ಮುಖಂಡರಾದ ಸುರೇಶ್ ನಾಯ್ಕ್, ಜಯ ಕೌಡೂರು, ಎಸ್.ರಾಮ್‌ದಾಸ್ ನಾಯ್ಕ್, ಲಕ್ಷ್ಮೀ ನಾಯ್ಕ್ ಉಪಸ್ಥಿತರಿದ್ದರು.