ಅನುದಾನಕ್ಕಾಗಿ ಬಿಜೆಪಿಗರು ಕೇಂದ್ರ ಸರಕಾರವನ್ನು ಪ್ರಶ್ನಿಸಲಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರಗೇಟು
ಕರಾವಳಿ ಅಭಿವೃದ್ಧಿಗೆ ಕಾಂಗ್ರೆಸ್ ಅನುದಾನ ನೀಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ
ಉಡುಪಿ: ಕೇಂದ್ರಸರಕಾರದಿಂದ ಕರ್ನಾಟಕಕ್ಕೆ ಹಾಗೂ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ನಾಯಕರು ಏಕೆ ಧ್ವನಿ ಎತ್ತುತ್ತಿಲ್ಲ? ರಾಜ್ಯದ ಅಷ್ಟು ಮಂದಿ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ಜನರನ್ನು ದಾರಿ ತಪ್ಪಿಸಿ, ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾತ್ರ ಅವರು ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಆರೋಪ ಮಾಡುವುದನ್ನು ಬಿಟ್ಟು ಬೇರೇನು ಗೊತ್ತಿಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಉಡುಪಿಗೆ ಇಂದು ಭೇಟಿ ನೀಡಿದ ಅವರು ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತಿದ್ದರು.
ರಾಜ್ಯದ ಕಾಂಗ್ರೆಸ್ ಸರಕಾರದಿಂದ ಕರಾವಳಿಗೆ ಅನ್ಯಾಯವಾಗುತ್ತಿದೆ. ಕರಾವಳಿ ಅಭಿವೃದ್ಧಿಗೆ ಕಾಂಗ್ರೆಸ್ ಬಿಡಿಗಾಸು ಅನುದಾನ ನೀಡುತ್ತಿಲ್ಲ ಎಂಬ ಕರಾವಳಿ ಶಾಸಕರು ಹಾಗೂ ಬಿಜೆಪಿ ನಾಯಕರ ಟೀಕೆಗಳಿಗೆ ಅವರು ಪ್ರತಿಕ್ರಿಯಿಸುತಿದ್ದರು. ಅನುದಾನದ ವಿಷಯದಲ್ಲಿ ಕೇಂದ್ರದ ಬಿಜೆಪಿ ಸರಕಾರ ದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಅವರು ಮೊದಲು ಧ್ವನಿ ಎತ್ತಬೇಕು ಎಂದರು.
ಬೆಂಕಿಗೆ ತುಪ್ಪ ಸುರಿಯುವ ಶೋಭಾ: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ಆಕೆ ಯಾವತ್ತೂ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾರೆ ಎಂದರು.
ಜಾರಿ ನಿರ್ದೇಶನಾಲಯ (ಈಡಿ) ದಾಳಿ ಹಿನ್ನೆಲೆಯಲ್ಲಿ ದಾಖಲೆಗಳನ್ನು ಸುಟ್ಟು ಹಾಕಲಾಗಿದೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ, ಓರ್ವ ಮಹಿಳೆಯಾಗಿ ಶೋಭಾರ ಕುರಿತು ನನಗೆ ಗೌರವವಿದೆ. ಆದರೆ, ಆಕೆ ಸುಳ್ಳು ಹೇಳುವುದನ್ನು ಸಹಿಸುವುದಿಲ್ಲ; ದಾಖಲೆಗಳನ್ನು ಸುಟ್ಟು ಹಾಕಿರುವುದನ್ನು ಅವರೇನು ನೋಡಿದ್ದರಾ? ಎಂದು ಖಾರವಾಗಿ ಪ್ರಶ್ನಿಸಿದರು.
ಮೂಡಾದ ಮೇಲೆ ಇಡಿ ದಾಳಿಯೇ ರಾಜಕೀಯ ಪ್ರೇರಿತವಾದುದು. ರಾಜಭವನ, ರಾಜ್ಯಪಾಲರು ತುಂಬಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವುದೇ ಕೇಂದ್ರ ಸರಕಾರದ ಹುನ್ನಾರ ವಾಗಿದೆ ಎಂದು ಹೆಬ್ಬಾಳ್ಕರ್ ಕಿಡಿಕಾರಿದರು.
ಡಾ. ಕಸ್ತೂರಿ ರಂಗನ್ ವರದಿ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಡಾ. ಕಸ್ತೂರಿ ರಂಗನ್ ವರದಿ ಅನುಷ್ಠಾನದ ಕುರಿತಂತೆ ಹೆಚ್ಚುತ್ತಿರುವ ಪ್ರತಿರೋಧದ ಕುರಿತು ಪ್ರಶ್ನಿಸಿದಾಗ, ಡಾ. ಕಸ್ತೂರಿರಂಗನ್ ವರದಿ ಬಗ್ಗೆ ಈಗಾಗಲೇ ಸರಕಾರದ ಮಟ್ಟದಲ್ಲಿ ಸುದೀರ್ಘ ಚರ್ಚೆಯಾಗಿದೆ. ಸದ್ಯ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಈಗ ಯಾವುದೇ ಭರವಸೆ ನೀಡುವುದಿಲ್ಲ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಜೊತೆ ಚರ್ಚೆ ಮಾಡಿ ಸೂಕ್ತ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಹೇಳಿದರು.
ಸಿಎಂ ಸಕಾರಾತ್ಮಕ ಸ್ಪಂದನೆ: ಪಂಚಮಸಾಲಿಗಳಿಂದ 2ಎ ಮೀಸಲಾತಿ ಬಗ್ಗೆ ಬರುತ್ತಿರುವ ಬೇಡಿಕೆಯ ಕುರಿತು ಕೇಳಿದಾಗ, ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದಲ್ಲಿ ಮೂರು ಕಡೆ ವಿಧಾನಸಭೆಗೆ ಉಪಚುನಾವಣೆ ನಡೆಯಲಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಸಭೆಯಲ್ಲಿ ನಡೆದ ವಿಚಾರವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಹಿರಿಯ ಮುಖಂಡರಾದ ಜಯಪ್ರಕಾಶ್ ಹೆಗ್ಡೆ, ಗೋಪಾಲ್ ಪೂಜಾರಿ, ಐವಾನ್‌ಡಿಸೋಜ, ಉದಯ್ ಕುಮಾರ್ ಮುನಿಲಾಯಲು, ದಿನೇಶ್ ಹೆಗ್ಡೆ, ಪ್ರಸಾದ್‌ರಾಜ್ ಕಾಂಚನ್, ಎಂ.ಎ.ಗಪೂರ್ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲುವು ನಿಶ್ಚಿತ
ದಕ್ಷಿಣಕನ್ನಡ - ಉಡುಪಿ ಸ್ಥಳೀಯ ಸಂಸ್ಥೆಗಳ ಕರ್ನಾಟಕ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲುವು ಶತ:ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.
ಸೋಮವಾರ ನಡೆಯುವ ಚುನಾವಣೆಗಾಗಿ ರಾಜು ಪೂಜಾರಿ ಅವರ ಪರ ಕೊನೆಯ ಹಂತದ ಪ್ರಚಾರ ನಡೆಯುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ. ಪಕ್ಷ ಗಟ್ಟಿಯಾಗಲು ಕಾಂಗ್ರೆಸ್‌ಗೆ ಈ ಚುನಾವಣೆ ಗೆಲ್ಲುವ ಅಗತ್ಯವಿದೆ. ಕರಾವಳಿಯಲ್ಲಿ ಪಕ್ಷದ ಅಭ್ಯರ್ಥಿ ರಾಜು ಪೂಜಾರಿ ಪರ ಒಲವು ಇದೆ. ಗೆಲುವಿಗೆ ಉತ್ತಮ ವಾತಾವರಣವಿದೆ. ಅದಕ್ಕಾಗಿ ಪಕ್ಷದ ನಾಯಕರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ನಾವು ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಮತದಾರರು ಕೂಡ ಕಾಂಗ್ರೆಸ್ ಪಕ್ಷದ ಯೋಜನೆಗಳ ಬಗ್ಗೆ ವಿಶ್ವಾಸವಿಟ್ಟಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳು ನಮ್ಮನ್ನು ಕೈ ಬಿಡುವುದಿಲ್ಲ. ಪ್ರತಿ ಪಂಚಾಯತಿಗೆ ಎರಡು ಕೋಟಿ ಅನುದಾನ ತರಲು ಉದ್ಯೋಗ ಖಾತ್ರಿ ಸಹಕಾರಿಯಾಗಿದೆ. ಇದನ್ನು ಜಾರಿಗೆ ತಂದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಬಿಜೆಪಿ ಅತಿವಿಶ್ವಾಸ: ಗೆಲುವಿನ ಬಗ್ಗೆ ಬಿಜೆಪಿಗಿರುವುದು ಓವರ್ ಕಾನ್ಫಿಡೆನ್ಸ್. ಆದರೆ ಊಹಿಸುವುದೇ ಬೇರೆ, ಆಗೋದೆ ಬೇರೆ. ಬಿಜೆಪಿಯವರು ಏನೇ ಮಾಡಿದರೂ ನಮ್ಮ ಅಭ್ಯರ್ಥಿ ರಾಜು ಪೂಜಾರಿ ಗೆದ್ದೇ ಗೆಲ್ಲುವರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.