ಬಿಜೆಪಿ ಟಿಕೆಟ್ ಹಗರಣ: ಪಾರದರ್ಶಕ ತನಿಖೆಗೆ ಸಿಪಿಎಂ ಆಗ್ರಹ
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ 7 ಕೋಟಿ ವಂಚನೆ ಪ್ರಕರಣದಲ್ಲಿ ಚೈತ್ರ, ಹಡಗಲಿ ಹಾಲಸ್ವಾಮಿ ಅಲ್ಲದೇ ಬಿಜೆಪಿಯ ಕೆಲವು ರಾಜ್ಯ ಪ್ರಮುಖ ಮುಖಂಡರೂ ಭಾಗಿಯಾಗಿರುವ ಸಾಧ್ಯತೆ ಇದೆ ಎಂಬ ಅನುಮಾನವಿದೆ ಈ ಬಗ್ಗೆ ತನಿಖೆ ಚುರುಕುಗೊಳಿಸಿ ಹಗರಣದ ಹಿಂದಿನ ನೈಜ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಇಂದು ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಸಿಪಿಎಂ ಕುಂದಾಪುರ ವಲಯ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದರು.
ಪ್ರಕರಣ ನಡೆದ ವೇಳೆಯಲ್ಲಿ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದ ಗೃಹ ಮಂತ್ರಿ ಅವರು ಇಂತಹ ಪ್ರಕರಣದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದರೆ ಸುಮ್ಮನಿರಲ್ಲ ಎಂಬ ಅವರ ಹೇಳಿಕೆ ಅನುಮಾನ ಮೂಡಿಸುತ್ತದೆ ಎಂದ ಅವರು ಹಗರಣದ ಪ್ರಮುಖ ಆರೋಪಿ ಚೈತ್ರ ಬಗ್ಗೆ ದೇಶದ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರು ಧೈರ್ಯ ವಂತ ಹುಡುಗಿ ಎಂದು ಹೇಳಿಕೆ ನೀಡಿರುವುದು ಗಮನಿಸಬೇಕು.ಸಚಿವರಾಗಿದ್ದಾಗ ಕಮಿಷನ್ ಹಗರಣದಲ್ಲಿ ಈಶ್ವರಪ್ಪ ಭ್ರಷ್ಟಾಚಾರ, ಕಾರ್ಕಳದಲ್ಲಿ ಪರಶುರಾಮ ಮೂರ್ತಿಯಲ್ಲಿ ಭ್ರಷ್ಟಾಚಾರದ ನಡೆಸಿರುವುದು ಬಿಜೆಪಿ ಪಕ್ಷ ಭ್ರಷ್ಟಾಚಾರಿ ಹಾಗೂ ಕೋಮುವಾದಿ ಎಂಬುವುದು ಸಾಬೀತಾಗಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ ಅವರು ಹಿಂದುತ್ವ, ರಾಷ್ಟ್ರೀಯತೆ, ದೇಶಪ್ರೇಮದ ಹೆಸರಿನಲ್ಲಿ ಯುವಜನತೆಯನ್ನು ದ್ವೇಷ ಭಾಷಣ ಮಾಡಿಸಿ ರಾಜಕೀಯ ಲಾಭ ಪಡೆದು ಅವರನ್ನು ಜೈಲು ಪಾಲು ಮಾಡುವ ಸಂಘಪರಿವಾರದ ನೀತಿಯನ್ನು ಸೋಲಿಸಿ ನೈಜ ರಾಜಕಾರಣ ಮುನ್ನಲೆಗೆ ತರಬೇಕಾಗಿದೆ ಎಂದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಎಂ ಮುಖಂಡರಾದ ಕೆ. ಶಂಕರ್, ಸುರೇಶ್ ಕಲ್ಲಾಗರ, ಬಲ್ಕೀಸ್, ಸಂತೋಷ ಹೆಮ್ಮಾಡಿ, ರವಿ ವಿ.ಎಂ, ಪಂಜು ಪೂಜಾರಿ, ಶೀಲಾವತಿ, ಪ್ರಕಾಶ್ ಕೋಣಿ, ಲಕ್ಷ್ಮಣ ಡಿ, ರಾಜೇಶ್ ವಡೇರಹೋಬಳಿ, ರಾಜ ಬಿ.ಟಿ.ಆರ್, ಉದಯ ಟೈಲರ್ ಇದ್ದರು.