ಬಿಜೆಪಿಯಿಂದ ಕೋಮುವಾದಿ ರಾಜಕಾರಣ ಮೂಲಕ ಅಧಿಕಾರಕ್ಕೇರುವ ಹುನ್ನಾರ: ಎಚ್.ಕೆ.ಪಾಟೀಲ್
ಉಡುಪಿ: ಕಾಂಗ್ರೆಸ್ ಸಮಾಜವನ್ನು ವಿಂಗಡಿಸದೆ ಒಗ್ಗೂಡಿಸುವ ಕಾರ್ಯ ಮಾಡಿದರೆ ಬಿಜೆಪಿ ಕುತಂತ್ರ, ಕೋಮುವಾದಿ ರಾಜಕಾರಣ ಹಾಗೂ ಹಣದ ಬಲದಿಂದ ಅಧಿಕಾರಕ್ಕೇರುವ ಹುನ್ನಾರ ನಡೆಸುತ್ತಿದೆ ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಕಾಂಗ್ರೆಸ್ ಭವನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು. ಕೋಮುವಾದಿ ಶಕ್ತಿಗಳಿಂದ ನಮ್ಮ ಶಕ್ತಿ ಕಡಿಮೆ ಆಗಿತ್ತು. ಆದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬಡವರ ಕಲ್ಯಾಣಕ್ಕೆ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ನಮ್ಮ ಶಕ್ತಿಯನ್ನು ಮತ್ತೆ ಬಲಪಡಿಸಲು ಪ್ರಯತ್ನಿಸುತ್ತಿ ದ್ದಾರೆ ಎಂದು ಅವರು ಹೇಳಿದರು.
ರಾಜ್ಯ ಸರಕಾರ ಕೇವಲ ಎರಡು ತಿಂಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಡಿಸೆಂಬರ್‌ನಲ್ಲಿ ಯುವ ಶಕ್ತಿ ಯೋಜನೆಯನ್ನು ಕೂಡ ಜಾರಿಗೆ ತರಲಿದೆ. ಈ ಮೂಲಕ ಬಡ ಕುಟುಂಬಗಳನ್ನು ಬಿಪಿಎಲ್ ಪಟ್ಟಿಯಿಂದ ಮೇಲಕ್ಕೆತ್ತುವ ಕಾರ್ಯ ಮಾಡಲಾಗುತ್ತಿದೆ. ಈ ಮೂಲಕ ಇಂದಿರಾ ಗಾಂಧಿಯ ಕಾಲ ಮತ್ತೆ ಮರುಕಳಿಸಲಿದೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರೀಶ್ ಕಿಣಿ, ದಿನೇಶ್ ಪುತ್ರನ್, ಶಂಕರ್ ಕುಂದರ್, ದಿನಕರ ಹೆರೂರು, ಪ್ರದೀಪ್ ಶೆಟ್ಟಿ, ಬಿ.ಆರ್. ರಾಜು ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು. ಅಣ್ಣಯ್ಯ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.