ಬಿಜೆಪಿಯವರಿಂದ ಕೋಮುಗಲಭೆ ಸೃಷ್ಠಿಸುವ ಹುನ್ನಾರ: ಪ್ರಸಾದ್‌ರಾಜ್ ಕಾಂಚನ್ ಆರೋಪ
ಉಡುಪಿ, ಜು.29: ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ದೂರು ನೀಡದಿದ್ದರೂ ಪೊಲೀಸರೇ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಈ ವಿಚಾರವನ್ನು ಬೀದಿ ರಂಪ ಮಾಡುವ ಮೂಲಕ ಕೋಮುಗಲಭೆ ಸೃಷ್ಠಿ ಸುವ ಹುನ್ನಾರ ನಡೆಸುತ್ತಿದ್ದಾರೆ. ಅದು ಬಿಟ್ಟು ಬೇರೆ ಯಾವುದೇ ಅಜೆಂಡಾ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತಮ ರೀತಿಯಲ್ಲಿ ನಡೆಯುತ್ತಿರುವ ಪೊಲೀಸರ ತನಿಖೆಗೂ ಈ ಮೂಲಕ ತೊಂದರೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಎಬಿವಿಪಿ ಪ್ರತಿಭಟನೆ ನಡೆಸುವ ಅಗತ್ಯ ಇತ್ತೇ? ಅಲ್ಲದೆ ಇವರೊಂದಿಗೆ ಸ್ಥಳೀಯ ಶಾಸಕ ಯಶ್‌ಪಾಲ್ ಸುವರ್ಣ ಸೇರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿದರು.
ಸಮಾಜದಲ್ಲಿ ಗೊಂದಲಮಯ ಪರಿಸ್ಥಿತಿ ನಿರ್ಮಿಸುವ ಬಿಜೆಪಿ ವರ್ತನೆ ಸರಿಯಲ್ಲ. ಯಶ್‌ಪಾಲ್ ಸುವರ್ಣ ಉಡುಪಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತ ನಾಡುವ ಬದಲು ತನ್ನ ವರ್ಚಸ್ಸು ಹೆಚ್ಚಿಸುವ ಹಾಗೂ ಗೂಂಡಾಗಿರಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನೆರೆಯಿಂದ ಜಿಲ್ಲೆಯಲ್ಲಿ ಕೋಟ್ಯಂತರ ರೂ. ನಷ್ಟವಾಗಿದ್ದರೂ ಯಶ್‌ಪಾಲ್ ಸುವರ್ಣ ಮೌನ ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಕೆಲಸವನ್ನು ಸರಕಾರ ಮಾಡುತ್ತದೆ. ಆದುದರಿಂದ ವಿದ್ಯಾರ್ಥಿಗಳು ಧೈರ್ಯದಿಂದ ತಮ್ಮ ಶಿಕ್ಷಣ ವನ್ನು ಮುಂದುವರೆಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಉಪಾಧ್ಯಕ್ಷ ಕುಶಲ್ ಶೆಟ್ಟಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಮುಖಂಡರಾದ ಪ್ರಶಾಂತ್ ಪೂಜಾರಿ, ಸದಾಶಿವ ಪೂಜಾರಿ, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.