ಮಲ್ಪೆ ಬಂದರಿನಲ್ಲಿ ರಾಶಿ ರಾಶಿ ಬೊಂಡಾಸ್ ಮೀನು !
► ಯೂರೋಪ್ ದೇಶಗಳಲ್ಲಿ ಬೇಡಿಕೆ ಕುಸಿತ ►ಮೀನಿನ ದರದಲ್ಲಿ ಭಾರೀ ಇಳಿಕೆ
ಉಡುಪಿ, ಆ.17: ಮಳೆಗಾಲದ ರಜೆ ಮುಗಿದು ಸಮುದ್ರಕ್ಕೆ ಇಳಿದ ಆಳ ಸಮುದ್ರ ಮೀನುಗಾರಿಕೆಯ ಬೋಟುಗಳಿಗೆ ಬೊಂಡಾಸ್ ಮೀನುಗಳೇ ಟನ್ ಗಟ್ಟಲೆ ಸಿಗುತ್ತಿವೆ. ವಿದೇಶದಲ್ಲಿ ಈ ಮೀನಿಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಇದರ ಬೆಲೆ ಪಾತಾಳಕ್ಕೆ ಇಳಿದಿದೆ. ಇದರಿಂದ ಬಂದರಿನ ಎಲ್ಲೆಂದರಲ್ಲಿ ಬೊಂಡಾಸ್ ಮೀನುಗಳ ರಾಶಿಗಳೇ ಕಂಡುಬರುತ್ತಿದೆ. ಮೀನು ಹೇರಳವಾಗಿ ಸಿಕ್ಕರೂ ದರ ಇಲ್ಲದೆ ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ.
ಮೇ 31ರಿಂದ ಜು.31ರವರೆಗೆ ಒಟ್ಟು ಎರಡು ತಿಂಗಳ ಕಾಲ ಜಿಲ್ಲಾಡಳಿತ ಮೀನುಗಾರಿಕೆಗೆ ನಿಷೇಧ ಹೇರಿತ್ತು. ಇದೀಗ ಎರಡು ತಿಂಗಳ ವಿಶ್ರಾಂತಿಯ ಬಳಿಕ ಸಮುದ್ರ ಪೂಜೆ ಮುಗಿಸಿ ನೂರಾರು ಮೀನುಗಾರಿಕಾ ಬೋಟುಗಳು ಕಡಲಿಗೆ ಇಳಿದು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ.
ಆ.7ರಂದು ಮಲ್ಪೆ ಬಂದರಿನಿಂದ ನೂರಾರು ಆಳಸಮುದ್ರ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳಿದ್ದು, ಇದೀಗ 10 ದಿನಗಳ ಮೀನುಗಾರಿಕೆ ಮುಗಿಸಿ ಕಳೆದ ಎರಡು ಮೂರು ದಿನಗಳಿಂದ ಈ ಬೋಟುಗಳು ಮಲ್ಪೆ ಬಂದರಿಗೆ ವಾಪಾಸ್ಸಾಗುತ್ತಿದೆ. ಆಳ ಸಮುದ್ರ ಮೀನುಗಾರಿಕಾ ಬೋಟುಗಳ ಬಲೆಗಳಿಗೆ ಈ ಬಾರಿ ಟನ್‌ಗಟ್ಟಲೆ ಬೊಂಡಾಸ್ ಮೀನುಗಳೇ ಬಿದ್ದಿದ್ದು, ಇದರಿಂದ ಬಂದರಿನಲ್ಲಿ ಎಲ್ಲಿ ನೋಡಿದರೂ ಬೊಂಡಾಸ್ ಮೀನುಗಳ ರಾಶಿಯೇ ಕಾಣ ಸಿಗುತ್ತಿವೆ.
ರಫ್ತಿಗೆ ಬೇಡಿಕೆ ಕುಸಿತ: ಬೊಂಡಾಸ್ ಮೀನಿಗೆ ಯುರೋಪ್ ದೇಶಗಳಲ್ಲಿ ಹೆಚ್ಚಿನ ಬೇಡಿಕೆಗಳಿವೆ. ಆದುದರಿಂದ ಇಲ್ಲಿಂದ ಈ ಮೀನುಗಳು ಈ ದೇಶಗಳಿಗೆ ರಫ್ತು ಆಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಯುರೋಪ್ ದೇಶಗಳಲ್ಲಿ ಆರ್ಥಿಕ ಹಿಂಜರಿತ ಕಂಡುಬಂದಿರುವುದರಿಂದ ಈ ಮೀನಿಗಳಿಗೆ ಬೇಡಿಕೆ ಇಲ್ಲವಾಗಿದೆ.
ಇದರ ಪರಿಣಾಮವಾಗಿ ಬೊಂಡಾಸ್ ಮೀನಿನ ದರ ಕೂಡ ಪಾತಾಳಕ್ಕೆ ಕುಸಿತ ಕಂಡಿದೆ. ಇದು ಕಳೆದ ಮಾರ್ಚ್ ತಿಂಗಳಿಂದ ನಡೆಯುತ್ತಿರುವ ಬೆಳವಣಿಗೆ ಯಾಗಿದೆ. ಅಲ್ಲದೆ ಈ ಹಿಂದಿನ ಅವಧಿಯಲ್ಲಿ ದೊರೆತ ಮೀನುಗಳೇ ಇನ್ನು ಕೂಡ ರಫ್ತು ಆಗದೆ ರಫ್ತುದಾರರ ಸಂಗ್ರಹದಲ್ಲಿ ಸ್ಟೋರ್ ಮಾಡಿ ಇಡಲಾಗಿದೆ. ಆದುದರಿಂದ ಈಗ ಹೇರಳವಾಗಿ ಸಿಗುತ್ತಿರುವ ಮೀನುಗಳು ರಫ್ತುದಾರರಿಗೆ ಬೇಡವಾಗಿದೆ.
ಇದರೊಂದಿಗೆ ಐಸ್‌ಪ್ಲ್ಯಾಂಟ್‌ಗಳಲ್ಲಿ ಐಸ್‌ಗಳ ಕೊರತೆ ಕೂಡ ಕಾಡುತ್ತಿದ್ದು, ಇದರಿಂದ ಈ ಮೀನು ಸ್ಟೋರೇಜ್ ಮಾಡಿ ಇಡಲು ಕೂಡ ಆಗುತ್ತಿಲ್ಲ. ಇದರ ಪರಿಣಾಮವಾಗಿ ಬೊಂಡಾಸ್ ಮೀನು ಮಲ್ಪೆ ಬಂದರಿನಲ್ಲಿ ರಾಶಿರಾಶಿ ಉಳಿದು ಕೊಂಡಿದೆ. ಬೊಂಡಾಸ್ ಮೀನಿನಲ್ಲಿ ಫಸ್ಟ್, ಸೆಕೆಂಡ್, ಥರ್ಡ್ ಗ್ರೇಡ್ ಎಂಬುದಿದೆ. ಇದರಿಂದ ಸದ್ಯ ಫಸ್ಟ್ ಗ್ರೇಡ್‌ಗಳನ್ನು ಮಾತ್ರ ಆಯ್ದು ಸ್ಟೋರ್ ಮಾಡಿ ಇಡಲಾಗುತ್ತಿದೆ. ಉಳಿದ ಗ್ರೇಡ್‌ನ ಮೀನಿಗೆ ನಯಾಪೈಸೆಯ ಬೇಡಿಕೆ ಇಲ್ಲವಾಗಿದೆ.
ಮೀನುಗಾರರಿಗೆ ಅಪಾರ ನಷ್ಟ
ಬೊಂಡಾಸ್ ಮೀನಿನ ಬಂಪರ್ ಸಿಕ್ಕರೂ ಅದರ ದರ ಕುಸಿದಿರುವುದರಿಂದ ಮೀನುಗಾರರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಒಂದೆಡೆ ಡಿಸೇಲ್ ಬೆಲೆ ಏರಿಕೆ ಇನ್ನೊಂದು ಮೀನಿನ ದರ ಇಳಿಕೆಯಿಂದ ಮೀನುಗಾರಿಗೆ ಈ ಋತುವಿನ ಆರಂಭದಲ್ಲಿಯೇ ದೊಡ್ಡ ಹೊಡೆದ ಬಿದ್ದಿದೆ.
ಬೊಂಡಾಸ್ ಮೀನಿನ ಫಸ್ಟ್ ಗ್ರೆಡ್‌ಗೆ ಕಳೆದ ಮಳೆಗಾಲದ ಇದೇ ಅವಧಿ ಯಲ್ಲಿ ಕೆ.ಜಿ. 400-500ರೂ. ದರ ಇತ್ತು. ಆದರೆ ಇವತ್ತು ಅದರ ದರ ಕೆ.ಜಿ.ಗೆ 90ರೂ. ಆಗಿದೆ. ಅದೇ ರೀತಿ ಸೆಕೆಂಡ್‌ಗೆ 50ರೂ. ಮತ್ತು ಥರ್ಡ್‌ಗೆ ಕೆ.ಜಿ.ಗೆ 15ರೂ. ಬಂದು ತಲುಪಿದೆ. ಕೆಲವು ಮೀನು ಕೆ.ಜಿ. ಒಂದಕ್ಕೆ 7ರೂ.ಗೂ ಹೋಗುತ್ತಿದೆ ಎನುತ್ತಾರೆ ಮೀನುಗಾರ ಮೀನುಗಾರ ಲೋಕನಾಥ್ ಕುಂದರ್.
‘ಮೊದಲು ಮೀನು ತಂದ ಮರುದಿನವೇ ಬೋಟುಗಳಿಂದ ಖಾಲಿ ಮಾಡುತ್ತಿದ್ದೆವು. ಆದರೆ ಈಗ ಮಾಲಕರು ರಫ್ತಿಗೆ ಬೇಡಿಕೆ ಇಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಬೋಟುಗಳಲ್ಲಿರುವ ಮೀನುಗಳನ್ನು ಖಾಲಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ದರ ಇಲ್ಲದೆ ಮೀನು ಹೋಗುತ್ತಿಲ್ಲ. ಈ ಮೀನಿಗೆ ಸ್ವಲ್ಪ ಗಾಳಿ ತಾಗಿದರೂ ಹಾಳಾಗುತ್ತದೆ. ಹಾಗಾಗಿ ಬೋಟಿನಲ್ಲಿರುವ ಮೀನನ್ನು ಸ್ವಲ್ಪ ಸ್ವಲ್ಪವೇ ಖಾಲಿ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಈ ಮೀನು ಗುಜರಾತ್, ಕೇರಳ ಮೂಲಕ ವಿದೇಶಕ್ಕೆ ರಫ್ತು ಆಗುತ್ತದೆ. ಆದರೆ ಈಗ ವಿದೇಶಕ್ಕೆ 20 ಕಂಟೈನರ್‌ಗಳ ಬದಲು 2 ಕಂಟೈನರ್‌ಗಳಷ್ಟು ಮೀನುಗಳು ಮಾತ್ರ ರಫ್ತಾಗುತ್ತಿವೆ. ಹೀಗೆ ಇದರ ಬೇಡಿಕೆ ಸಾಕಷ್ಟು ಕುಸಿತ ಆಗಿದೆ. ಬೇರೆ ಮೀನು ಬಂದರೆ ಈ ಮೀನಿಗೆ ಬೇಡಿಕೆ ಹೆಚ್ಚಾಗಿ ದರ ಜಾಸ್ತಿಯಾಗುವ ನಿರೀಕ್ಷೆಯಲ್ಲಿ ಮೀನುಗಾರರು ಇದ್ದಾರೆ.
"ಬೊಂಡಾಸ್ ಮೀನು ಹೇರಳ ಸಂಖ್ಯೆಯಲ್ಲಿ ಬಂದರೂ ಮೀನಿನ ದರ ಕಡಿಮೆ ಆಗಿರುವುದರಿಂದ ಬೋಟಿನವರಿಗೆ ಸಾಕಷ್ಟ್ಟು ನಷ್ಟವಾಗಿದೆ. ಡಿಸೇಲ್ ದರ ಕೂಡ ಹೆಚ್ಚಾಗಿದೆ. ಈಗ ಬಂದಿರುವ ಮೀನುಗಳನ್ನು ಖಾಲಿ ಮಾಡಬೇಕಾಗಿದೆ. ದುಡಿಯುವವರಿಗೆ ನಷ್ಟ ಆಗಿದೆ. ಫ್ಯಾಕ್ಟರಿಯವರು ಕೂಡ ಈ ಮೀನು ಬೇಡ ಹೇಳುತ್ತಿದ್ದಾರೆ. ಮುಂದೆ ಬೇರೆ ಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ"
-ಪ್ರಭಾಕರ್ ಕೋಟ್ಯಾನ್, ಮೀನುಗಾರ, ಮಲ್ಪೆ
"ಬೊಂಡಾಸ್ ಮೀನು ಮಾರ್ಚ್-ಎಪ್ರಿಲ್‌ನಲ್ಲಿ ಮೊಟ್ಟೆ ಇಟ್ಟದ್ದು ಈಗ ಬೆಳೆದು ಬೋಟುಗಳಿಗೆ ಸಿಗುತ್ತಿವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಇದರ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಈ ಮಧ್ಯೆ ಈ ಮೀನಿಗೆ ವಿದೇಶಗಳಲ್ಲಿ ಬೇಡಿಕೆ ಇಲ್ಲದೆ ಈ ಮೀನುಗಳು ಇಲ್ಲೇ ಉಳಿದುಕೊಳ್ಳುವಂತಾಗಿದೆ. ಐಸ್ ಪ್ಲ್ಯಾಂಟ್‌ಗಳಲ್ಲಿ ಐಸ್ ಕೂಡ ಸಿಗದೆ ಇದನ್ನು ಸ್ಟೋರ್ ಮಾಡಿ ಇಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿವರ್ಷ ಇದೇ ಸಮಯದಲ್ಲಿ ಮೀನಿನ ದರ ನಿಗದಿಯಾಗುತ್ತದೆ. ಆದುದರಿಂದ ಆಗಸ್ಟ್ ಕೊನೆಯಲ್ಲಿ ಇದರ ದರ ಏರಿಕೆಯಾಗುವ ಸಾಧ್ಯತೆ ಕೂಡ ಇದೆ"
-ಡಾ.ಗೀತಾ ಶಿವಕುಮಾರ್, ಪ್ರಧಾನ ವಿಜ್ಞಾನಿ, ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನೆ ಸಂಸ್ಥೆ, ಮಂಗಳೂರು