ಬ್ರಹ್ಮಾವರ |ವಲಸೆ ಕಾರ್ಮಿಕರಿದ್ದ ಗೂಡ್ಸ್ ಟೆಂಪೋ ಪಲ್ಟಿ: ಮಕ್ಕಳು ಸಹಿತ 10ಕ್ಕೂ ಅಧಿಕ ಮಂದಿಗೆ ಗಾಯ
ಬ್ರಹ್ಮಾವರ, ಸೆ.8: ಸಿಮೆಂಟ್ ಮಿಕ್ಸರ್ ಯಂತ್ರವನ್ನು ಹೊತ್ತೊಯ್ಯುತ್ತಿದ್ದ ಟೆಂಪೋವೊಂದು ಅಪಘಾತಕ್ಕೀಡಾದ ಪರಿಣಾಮ ಅದರಲ್ಲಿದ್ದ ಮಹಿಳೆಯರು, ಮಕ್ಕಳು ಸಹಿತ 10ಕ್ಕೂ ಅಧಿಕ ವಲಸೆ ಕಾರ್ಮಿಕರು ಗಾಯಗೊಂಡ ಘಟನೆ ಸೆ.7ರಂದು ಸಂಜೆ ಹೊಸೂರು ಗ್ರಾಮದ ಅಮ್ಮುಜೆ ಡೆಂಗಲ್ ಎಂಬಲ್ಲಿ ನಡೆದಿದೆ.
ಬಾಗಲಕೋಟೆ ಮೂಲದ ಶೇಖಪ್ಪ ಮಾದರ್, ಅವರ ಹೆಂಡತಿ ಲಕ್ಷ್ಮವ್ವ, ಮಲ್ಲವ್ವ, ಯಮುನಪ್ಪಗೊರವರ, ಭೀಮವ್ವ, ರೇಣವ್ವ, ಲಕ್ಷ್ಮೀ ಗಡಗಿ ಹಾಗೂ ಅವರ ಮಗು ವಿಠಲ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ ಹೆಬ್ರಿ ಸಂತೆಕಟ್ಟೆ ಎಂಬಲ್ಲಿ ಕೆಲಸ ಮುಗಿಸಿಕೊಂಡು ಸಿಮೆಂಟ್ ಮಿಕ್ಸರ್ ಯಂತ್ರ ಲೋಡ್ ಮಾಡಿದ ಟೆಂಪೊದಲ್ಲಿ ಉಡುಪಿಗೆ ಬರುತ್ತಿದ್ದರು. ಹೆಬ್ರಿ ಸಂತೆಕಟ್ಟೆ ಮಾರ್ಗವಾಗಿ ಹೊಸೂರು ರಸ್ತೆಯಲ್ಲಿ ಬರುತ್ತಿದ್ದ ಟೆಂಪೊ ಚಾಲಕನ ಹತೋಟಿ ತಪ್ಪಿರಸ್ತೆ ಬದಿ ಪಲ್ಟಿಯಾಯಿತೆನ್ನಲಾಗಿದೆ. ಕೂಡಲೇ ಅಲ್ಲಿ ಸೇರಿದ ಜನರು ಕಾಂಕ್ರಿಟ್ ಮಿಕ್ಸರ್ ಯಂತ್ರದ ಮಧ್ಯೆ ಹಾಗೂ ಅಡಿಭಾಗದಲ್ಲಿ ಸಿಲುಕಿ ಹಾಕಿಕೊಂಡ ಕಾರ್ಮಿಕರನ್ನು ಹೊರಗೆ ತೆಗೆದರು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.