ಬ್ರಹ್ಮಾವರ: ಅರಣ್ಯ ಇಲಾಖೆಯ ಬೋನಿನಲ್ಲಿ ಚಿರತೆ ಸೆರೆ
ಬ್ರಹ್ಮಾವರ: ಆಹಾರ ಅರಸಿಗೊಂಡು ನಾಡಿಗೆ ಬಂದ ಚಿರತೆಯೊಂದು ಹನೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಡಿ ಬಸ್ ನಿಲ್ದಾಣದ ಬಳಿ ಅರಣ್ಯ ಇಲಾಖೆಯಿಂದ ಇರಿಸಲಾದ ಬೋನಿನಲ್ಲಿ ಸೆರೆಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ನಾಗರಡಿ ಪರಿಸರದಲ್ಲಿ ಚಿರತೆಯ ಓಡಾಟ ಇರುವ ಬಗ್ಗೆ ಆತಂಕಿತರಾಗಿದ್ದ ಸ್ಥಳೀಯರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಮೂರು ದಿನಗಳ ಹಿಂದೆ ಚಿರತೆ ಸೆರೆಗಾಗಿ ನಾಯಿಯೊಂದಿಗೆ ಬೋನನ್ನು ಇರಿಸಲಾಗಿತ್ತು.
ಇಂದು ಬೆಳಗಿನ ಜಾವ ಆಹಾರ ಅರಸಿ ಬಂದ 3-4ವರ್ಷ ಪ್ರಾಯದ ಗಂಡು ಚಿರತೆಯು ಬೋನಿನಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ರಕ್ಷಿಸಿದರು.
ಈ ಕಾರ್ಯಾಚರಣೆಯಲ್ಲಿ ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಸಹಾಯಕ ವಲಯ ಅರಣ್ಯಾಧಿಕಾರಿಗಳಾದ ಹರೀಶ್ ಕೆ., ಗುರುರಾಜ್, ಸುರೇಶ್ ಗಾಣಿಗ, ಗಸ್ತು ಅರಣ್ಯ ಪಾಲಕರಾದ ಸುರೇಶ್, ಮಂಜುನಾಥ್ ನಾಯಕ್, ಅಭಿಲಾಷ್, ಜಿತೇಶ್, ಅಶ್ವಿನ್ ಮೊದಲಾದವರು ಪಾಲ್ಗೊಂಡಿದ್ದರು.