ಬ್ರಹ್ಮಾವರ: ಗಾಯಾಳುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಹಲ್ಲೆ; ಪ್ರಕರಣ ದಾಖಲು
ಬ್ರಹ್ಮಾವರ, ಡಿ.22: ಬ್ರಹ್ಮಾವರ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಗಾಯಾಳು ಜೊತೆ ಬಂದಿದ್ದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಡಿ.21ರಂದು ಸಂಜೆ ವೇಳೆ ನಡೆದಿದೆ.
ಮಹೇಶ್ ಆಸ್ಪತ್ರೆಗೆ ದ್ವಿಚಕ್ರ ವಾಹನ ಅಪಘಾತಗೊಂಡ ಕಾರಣ ಹೇಳಿ ಇಬ್ಬರು ಯುವಕರು ತುರ್ತು ಚಿಕಿತ್ಸಾ ವಿಭಾಗಕ್ಕೆ ಬಂದಿದ್ದು, ಈ ವೇಳೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಕೇಶ್ ತಪಾಸಣೆ ಮಾಡುವಾಗ ಗಾಯಾಳು ತಪಾಸಣೆಯನ್ನು ನಿರಾಕರಿಸಿ ಹೊರ ಹೋಗಿದ್ದರು. ನಂತರ ಮತ್ತೆ ವಾಪಾಸ್ಸು ಬಂದು ಚಿಕಿತ್ಸೆ ನೀಡುವಂತೆ ತಿಳಿಸಿದ ಮೇರೆಗೆ ಡಾ.ರಾಕೇಶ್ ಚಿಕಿತ್ಸೆ ನೀಡಲು ಮುಂದಾದರು.
ಈ ವೇಳೆ ಗಾಯಳುವಿನ ಜೊತೆಯಲ್ಲಿದ್ದ ಆರೋಪಿ ತುರ್ತು ಚಿಕಿತ್ಸಾ ವಿಭಾಗದ ಬಾಗಿಲನ್ನು ಒತ್ತಾಯದಿಂದ ದೂಡಿ, ಕರ್ತವ್ಯದಲ್ಲಿದ್ದ ವೈದ್ಯರಿಗೆ ಚಿಕಿತ್ಸೆ ನೀಡುವಲ್ಲಿ ಅಡ್ಡಿಪಡಿಸಿ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಲು ಪ್ರಯತ್ನಿಸಿರುವುದಾಗಿ ದೂರಲಾಗಿದೆ. ಅಲ್ಲದೆ ವೈದ್ಯರಿಗೆ ಆರೋಪಿ ಕೈಯಿಂದ ಮುಖಕ್ಕೆ ಮತ್ತು ಕುತ್ತಿಗೆಗೆ ಹೊಡೆದು, ಚಿಕಿತ್ಸೆ ನೀಡದಂತೆ ತಡೆದು ಅಡ್ಡಿಪಡಿಸಿದ್ದಾನೆ. ಬಳಿಕ ಗಾಯಾಳು ಕೂಡ ವೈದ್ಯರ ಅನುಮತಿ ಇಲ್ಲದೆ ಆಸ್ಪತ್ರೆಯಿಂದ ನಿರ್ಗಮಿಸಿದ್ದಾನೆ. ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿ ಆಸ್ಪತ್ರೆಯ ಹೊರಗಡೆ ಪಾರ್ಕ್ ಮಾಡಿದ ಬೈಕಿನಲ್ಲಿ ಹೋಗಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.