ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಮಾಲಕರ ಮುಷ್ಕರ: ಸಂಧಾನ ಸಭೆ ವಿಫಲ
ಉಡುಪಿ, ಅ.1: ಕಟ್ಟಡ ಸಾಮಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಮುಷ್ಕರ ವನ್ನು ಕೈ ಬಿಡುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ಎಸ್ಪಿ ಡಾ.ಕೆ.ಅರುಣ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸಂದೀಪ್ ಸಮ್ಮುಖದಲ್ಲಿ ಒಕ್ಕೂಟದ ಪದಾಧಿಕಾರಿಗಳ ಜೊತೆ ರವಿವಾರ ಉಡುಪಿ ಪ್ರವಾಸಿ ಮಂದಿರದಲ್ಲಿ ನಡೆದ ಸಂಧಾನ ಸಭೆ ವಿಫಲಗೊಂಡಿದೆ.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಒಕ್ಕೂಟ ದವರ ಸಮಸ್ಯೆ ಹಾಗೂ ಬೇಡಿಕೆ ಕುರಿತು ಸುದೀರ್ಘವಾಗಿ ಚರ್ಚಿಸಿದರು. ನಾವು ವಾಹನಗಳಿಗೆ ಜಿಪಿಎಸ್ ಅಳವಡಿಸುವುದಕ್ಕೆ ಸಿದ್ಧರಿದ್ದೇವೆ. ಆದರೆ ನಮ್ಮ ಎಲ್ಲಾ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದೇ ಮುಷ್ಕರವನ್ನು ಕೈಬಿಡುವುದಿಲ್ಲ ಎಂದು ಒಕ್ಕೂಟದ ಪದಾಧಿಕಾರಿಗಳು ಸಭೆಗೆ ತಿಳಿಸಿದರು.
ವಾಹನಗಳಿಗೆ ಜಿಪಿಎಸ್, ರಾಜಧನ ಕಟ್ಟಿ ವ್ಯವಹಾರ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ. ಆದರೆ ಜಿಲ್ಲೆಯಲ್ಲಿ ಕೆಂಪು ಕಲ್ಲಿನ ಕ್ವಾರೆಗಳಿಲ್ಲ. ಜಿಪಿಎಸ್ ಇರುವ ವಾಹನಗಳಿಂದ ಕೆಂಪು ಕಲ್ಲು ಸಾಗಾಟ ಮಾಡಬಹುದೇ ಎಂದು ಒಕ್ಕೂಟದ ಪ್ರಮುಖ ಪ್ರಶ್ನಿಸಿದರು. ಗಣಿ ಇಲಾಖೆಯವರು ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಆದುದರಿಂದ ನಮಗೆ ಗಣಿ ಇಲಾಖೆಯ ಮೇಲೆ ನಂಬಿಕೆ ಇಲ್ಲ ಎಂದು ಪದಾಧಿಕಾರಿಗಳು ಆರೋಪಿಸಿದರು.
ನವೆಂಬರ್‌ನಲ್ಲಿಯೇ ಜಾರಿ: ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮಾತನಾಡಿ, ‘ಸರಕಾರ ಒನ್ ಸ್ಟೇಟ್ ಒನ್ ಜಿಪಿಎಸ್ ಕಾಯಿದೆಯನ್ನು 2022ರ ನವೆಂಬರ್ ನಲ್ಲಿ ಜಾರಿ ಮಾಡಿದ್ದು, ಜಿಲ್ಲೆಯಲ್ಲಿರುವ 36 ಉಪಖನಿಜಗಳನ್ನು ತೆಗೆಯಲು ಮತ್ತು ಸಾಗಿಸಲು ಜಿಪಿಎಸ್ ಅಳವಡಿಸಲೇ ಬೇಕು. ಸರಕಾರದ ಆದೇಶವನ್ನು ಅನುಷ್ಠಾನಗೊಳಿಸುವುದು ಅಧಿಕಾರಿಗಳ ಜವಾ ಬ್ದಾರಿ. ಉಡುಪಿ ಜಿಲ್ಲೆಯಲ್ಲಿ 488 ಹಾಗೂ ದ.ಕ. ಜಿಲ್ಲೆಯಲ್ಲಿ 990 ಜಿಪಿಎಸ್ ಅಳವಡಿಸಿರುವ ವಾಹನಗಳಿದ್ದು, ಜಿಪಿಎಸ್ ಇಲ್ಲದ ವಾಹನಗಳಿಗೆ 5000ರೂ. ದಂಡ ವಿಧಿಸ ಲಾಗುತ್ತದೆ. ಜಿಲ್ಲಾಡಳಿತಕ್ಕೆ ಯಾರಿಗೂ ಕಿರುಕುಳ ಕೊಡುವ ಉದ್ದೇಶ ಇಲ್ಲ. ಕಾನೂನು ಪಾಲನೆ ಮಾಡುವುದು ಅನಿವಾರ್ಯವಾಗಿದೆ ಎಂದರು.
2023 ಮಾ.17ರಂದು ಕೆಂಪು ಕಲ್ಲು ತೆಗೆಯುವ ಬಗ್ಗೆ ಕೆಲ ತಿದ್ದುಪಡಿ ಮಾಡಿರುವುದರಿಂದ ಅದಕ್ಕೂ ಈಗ ಅವಕಾಶ ನೀಡಲಾಗುತ್ತಿಲ್ಲ. ಈ ಬಗ್ಗೆ ರಾಜ್ಯ ಸರಕಾರದ ಸುತ್ತೋಲೆ ಕೂಡ ಬಂದಿದೆ. ಆದರೆ ಅಂತರ್ಜಲದ ದೃಷ್ಟಿಯಿಂದ ಕೃಷಿ, ಕೆರೆ, ಬಾವಿ ಹೊಂಡಗಳನ್ನು ತೆರೆಯುವುದಕ್ಕೆ ಅವಕಾಶ ನೀಡಲಾಗುತ್ತದೆ. ಈ ಹೊಂಡ 2 ಮೀಟರ್‌ಗಳಿಗಿಂತ ಜಾಸ್ತಿ ಆಳ ಹೋಗಲು ಅವಕಾಶ ಇಲ್ಲ. ಪಟ್ಟಾ ಜಾಮೀನಿನ ಮಾಲಕರು ಮುಂದೆ ಬಂದರೆ ತಾತ್ಕಾಲಿಕವಾಗಿ ಅನುಮತಿ ನೀಡಲು ಸೂಚನೆ ನೀಡಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಎಂ.ಎ.ಗಫೂರ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಸಂದೀಪ್, ದಿನೇಶ್ ಪುತ್ರನ್, ರಾಜು ಪೂಜಾರಿ, ಹರೀಶ್ ಕಿಣಿ, ಪ್ರಸನ್ನ ಕುಮಾರ್ ಶೆಟ್ಟಿ ಮೊದಲಾ ದವರು ಉಪಸ್ಥಿತರಿದ್ದರು.
‘ಸುಪ್ರೀಂ ಕೋರ್ಟ್‌ನ ಆದೇಶ ಎಲ್ಲರೂ ಪಾಲನೆ ಮಾಡಬೇಕು. ಜಿಲ್ಲೆಯಲ್ಲಿ ಸೈಜ್ ಕಲ್ಲಿನ 50 ಅಧಿಕೃತ ಕ್ವಾರೆಗಳಿದ್ದು, ಇಲ್ಲಿ ಮಾತ್ರ ಕಲ್ಲು ತೆಗೆದು ಸಾಗಾಟ ಮಾಡಬೇಕು. ಪರವಾನಿಗೆ ಇಲ್ಲದೆ ಯಾರು ಕೂಡ ಕಲ್ಲು ಸಾಗಾಟ ಮಾಡಲು ಅವಕಾಶ ನೀಡುವುದಿಲ್ಲ. ಅನಧಿಕೃತ ಕ್ವಾರೆ ಮಾಲಕರು ಕೂಡಾ ಪರವಾನಿಗೆ ಪಡೆದುಕೊಳ್ಳಬೇಕು. ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸುವ ಯಾರಿಗೂ ನಾವು ತೊಂದರೆ ಕೊಡುವುದಿಲ್ಲ’
-ಡಾ.ಕೆ.ಅರುಣ್, ಎಸ್ಪಿ, ಉಡುಪಿ