ಬೈಂದೂರು ಬರಗಾಲ ಪೀಡಿತ ತಾಲೂಕನ್ನಾಗಿ ಘೋಷಿಸಬೇಕು: ಸಂಸದ ಬಿ.ವೈ ರಾಘವೇಂದ್ರ
ಬೈಂದೂರು: ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಮಳೆ ಕೊರತೆಯಿಂದಾಗಿ ಭತ್ತದ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳು ಒಣಗಿದ್ದು ಬೈಂದೂರನ್ನು ಬರಗಾಲ ಪೀಡಿತ ತಾಲೂಕನ್ನಾಗಿ ಘೋಷಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದರು.
ಅವರು ಬೈಂದೂರು ಆಡಳಿತ ಸೌಧದ ಶಾಸಕರ ಕಛೇರಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳ ಸಂಖ್ಯೆ ತೀರಾ ಕಡಿಮೆಯಿದ್ದು ಶಕ್ತಿ ಯೋಜನೆಯ ಲಾಭ ಜಿಲ್ಲೆಯ ಮಹಿಳೆಯರಿಗೆ ದೊರೆಯುತ್ತಿಲ್ಲ. ಖಾಸಗಿ ಬಸ್ಸುಗಳಿಗೂ ಸಬ್ಸಿಡಿ ಒದಗಿಸಿದರೆ ಕರಾವಳಿಯ ಹೆಣ್ಣುಮಕ್ಕಳಿಗೆ ಅನುಕೂಲ ಮಾಡಿದಂತಾ ಗುವುದು. ಇಲ್ಲದಿದ್ದರೆ ಕೇವಲ ಪ್ರಚಾರವಾವುದು. ಮಹಿಳೆಯರಿಗೆ ಒಂದು ಕಡೆ ಹಣವನ್ನು ಕೊಟ್ಟಂತೆ ಮಾಡಿ ಟ್ಯಾಕ್ಸ್ ರೂಪದಲ್ಲಿ ಹಿಂಪಡೆಯುತ್ತಿದ್ದಾರೆ. ಇದು ತೋರಿಕೆಯ ಯೋಜನೆಯಾಗಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಟೀಕಿಸಿದರು.
ಬಿಜೆಪಿ ಸರಕಾರ ರೈತರಿಗೆ ನೀಡಿದ ಉಚಿತ ವಿದ್ಯುತ್ ಯೋಜನೆಯಂತೆ ಲೋಡ್ ಶೆಡ್ಡಿಂಗ್ ಮಾಡದೇ ವಿದ್ಯುತ್ ಒದಗಿಸ ಬೇಕು. ವಿದ್ಯುತ್ ಕೊರತೆ ಇದ್ದರೆ, ಬೇರೆ ರಾಜ್ಯದಿಂದಾದರೂ ಖರೀದಿಸಿ ನೀಡಲಿ. ರೈತರಿಗೆ ನೀರು, ವಿದ್ಯುತ್ ದೊರೆತರೆ ಯಾವುದೇ ಭಾಗ್ಯದ ಅವಶ್ಯಕತೆ ಇರುವುದಿಲ್ಲ ಎಂದರು.
ಅಧಿಕಾರಿಗಳ ಸಭೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚುತ್ತಿದ್ದು ಶೀಘ್ರ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಪ್ರವಾಸೋದ್ಯಮ ಇಲಾಖೆ, ಬಂದರು, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ಪ್ರಗತಿಯ ಬಗ್ಗೆ ಈ ವೇಳೆ ಚರ್ಚಿಸಿದರು.
ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ 25 ಟವರ್ ನಿರ್ಮಾಣ ಕಾಮಗಾರಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿ, ಸರಕಾರಿ ಆಸ್ಪತ್ರೆ ಸಹಿತ ಹಲವು ವಿಚಾರಗಳು ಪ್ರಸ್ತಾಪಕ್ಕೆ ಬಂದಿತು.
ಸಭೆಯಲ್ಲಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಇಓ ಭಾರತಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳಿದ್ದರು.