ಮಲ್ಪೆ | ಮೀನುಗಾರ ಸಮುದ್ರಪಾಲು: ಬೋಟ್ ಚಾಲಕನ ವಿರುದ್ಧ ಪ್ರಕರಣ ದಾಖಲು
ಮಲ್ಪೆ, ಸೆ.19: ಬೋಟಿನ ಚಾಲಕ ನಿರ್ಲಕ್ಷ್ಯದಿಂದ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಡಿಶಾ ರಾಜ್ಯದ ಅಭಿಮನ್ಯು ಮಲಿಕ್(36) ಎಂಬವರು ಕಳೆದ ಮೂರು ವರ್ಷಗಳಿಂದ ಮಲ್ಪೆಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಸೆ.12ರಂದು ರಾತ್ರಿ ಇತರ ಮೀನುಗಾರರೊಂದಿಗೆ ಮಲ್ಪೆಯಿಂದ ನವರತ್ನ ಬೋಟಿನಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ತೆರಳಿದ್ದರು. ಸೆ.13ರಂದು ಮಧ್ಯರಾತ್ರಿ ಬೋಟಿನಲ್ಲಿ ಎಲ್ಲರೂ ಮಲಗಿದ್ದು, ಈ ವೇಳೆ ಬೋಟು ಚಾಲಕ ಬೋಟನ್ನು ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಅಲೆಗಳ ಮೇಲೆ ರಭಸವಾಗಿ ಚಲಾಯಿಸಿದ ಪರಿಣಾಮ ಅಭಿಮನ್ಯು ಆಯತಪ್ಪಿ ನೀರಿಗೆ ಬಿದ್ದಿದ್ದಾರೆ ಎಂದು ದೂರಲಾಗಿದೆ.
ನೀರಿಗೆ ಬಿದ್ದ ನಂತರ ಕೂಡ ಇವರು ಅಭಿಮನ್ಯುರನ್ನು ರಕ್ಷಿಸುವ ಪ್ರಯತ್ನವನ್ನು ಮಾಡದೇ ಮುಂದೆ ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಅವರೊಂದಿಗೆ ಇದ್ದ ಮೀನುಗಾರರೊಬ್ಬರು ಪ್ರಶ್ನೆ ಮಾಡಿದ್ದು, ಅದಕ್ಕೆ ಚಾಲಕ ಬೋಟನ್ನು ಕಾರವಾರಕ್ಕೆ ತಂದು ನಿನಗೆ ನನ್ನ ಬೋಟ್ ನಲ್ಲಿ ಕೆಲಸವಿಲ್ಲ ಎಂದು ಬೈದು ಕಳುಹಿಸಿರುವುದಾಗಿ ಆರೋಪಿಸಲಾಗಿದೆ.
ಈ ಬಗ್ಗೆ ಸೆ.18ರಂದು ಮಲ್ಪೆಗೆ ಆಗಮಿಸಿದ ಮೃತರ ಸಹೋದರ ಸುಶಾಂತ ಮಲಿಕ್, ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೋಟ್ ಚಾಲಕನ ನಿರ್ಲಕ್ಷ್ಯ ಹಾಗೂ ದುಡುಕಿನಿಂದ ಅಭಿಮನ್ಯು ಮಲಿಕ್ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ಅವರು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿ ರುವ ಮಲ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.