ಶಿರ್ವ: ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು
ಶಿರ್ವ, ಮಾ.29: ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಶಿರ್ವ ಗ್ರಾಮದ ಜಾರಾಂದಾಯ ದೈವಸ್ಥಾನದ ಜಾತ್ರೆಗೆ ತೆರಳಿ ಚುನಾವಣಾ ಸಭೆ ನಡೆಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.26ರಂದು ರಾತ್ರಿ 11:30ರ ಸುಮಾರಿಗೆ ಜಯಪ್ರಕಾಶ್ ಹೆಗ್ಡೆ ಶಿರ್ವ ಜಾರಾಂದಾಯ ದೈವಸ್ಥಾನದ ಜಾತ್ರೆಗೆ ತೆರಳಿ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಹೋಗಿರುವುದಾಗಿ ಕಾಪು ಪ್ಲೈಯಿಂಗ್ ಸ್ಕ್ವಾಡ್ ಟೀಮ್ ನ ವಿನ್ಸೆಂಟ್ ವಿನೋದ್ ಡಿಸೋಜ ಮಾಹಿತಿ ಬಂದಿತ್ತು. ಅದರಂತೆ ತಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೈವಸ್ಥಾನದ ಆಡಳಿತ ಮಂಡಳಿಯವರು ತಡರಾತ್ರಿಯವರೆಗೆ ಕಾರ್ಯಕ್ರಮ ನಡೆಸಿರುವುದು ಮತ್ತು ಈ ಧಾರ್ಮಿಕ ಸ್ಥಳದಲ್ಲಿ ಆಡಳಿತ ಮಂಡಳಿಯವರು ಜಯಪ್ರಕಾಶ್ ಹೆಗ್ಡೆ ಜೊತೆಗೂಡಿ ಚುನಾವಣಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಗೆ ಪ್ರಭಾವ ಬೀರಿರುವುದು ಕಂಡು ಬಂದಿದೆ ಎಂದು ದೂರಲಾಗಿದೆ. ಈ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ವಿನ್ಸೆಂಟ್ ವಿನೋದ್ ಡಿಸೋಜ ನೀಡಿರುವ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.