ಎಫ್‌ಐಆರ್, ಜಾರ್ಜ್‌ಶೀಟ್ ಸಿದ್ಧತೆಯಲ್ಲಿ ಎಚ್ಚರ ಅಗತ್ಯ: ನ್ಯಾ.ವೆಂಕಟೇಶ ನಾಯ್ಕ್
ಉಡುಪಿ : ಒಂದು ಪ್ರಕರಣದಲ್ಲಿ ಪ್ರಥಮ ವರ್ತಮಾನ ವರದಿಯಿಂದ ದೋಷರೋಪಣಾ ಪಟ್ಟಿ ಸಿದ್ಧಪಡಿಸುವವರೆಗೂ ಪೊಲೀಸರು ಮತ್ತು ವಕೀಲರು ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಆಗ ಮಾತ್ರ ಆ ಪ್ರಕರಣದಲ್ಲಿ ನ್ಯಾಯದಾನ ಸಮಪರ್ಕವಾಗಿ ದೊರೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೆಂಕಟೇಶ ನಾಯ್ಕ್ ಟಿ. ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ವತಿಯಿಂದ ಶನಿವಾರ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಅಪರಾ ಧಿಕ ಪ್ರಕರಣಗಳ ತನಿಖಾ ವಿಧಾನ’ ಮತ್ತು ‘ದೋಷಾರೋಪಣಾ ಪಟ್ಟಿಯಿಂದ ತೀರ್ಪಿನವರೆಗಿನ ಪಯಣ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಆರೋಪಿಗಳ ಹಕ್ಕುಗಳನ್ನು ಸಂರಕ್ಷಣೆ ಮಾಡುವುದು ಮುಖ್ಯವಾಗುತ್ತದೆ. ವಾರೆಂಟ್ ಇಲ್ಲದ ಹೊರತು ಪೊಲೀಸರು ಯಾವುದೇ ಪ್ರಕರಣದಲ್ಲೂ ಆರೋಪಿಗಳನ್ನು ಬಂಧಿಸುವಂತಿಲ್ಲ. ಪೊಲೀಸರು ಯಾವುದೇ ವಿಳಂಬ ಮಾಡದೆ ಎಫ್‌ಐಆರ್ ದಾಖಲಿಸಬೇಕು. ಎಫ್‌ಐಆರ್ ಸಂದರ್ಭದಲ್ಲಿ ದೂರುದಾರರು ನೀಡುವ ದಾಖಲೆಗಳು ಕೂಡ ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ಸಂತ್ರಸ್ತರ ಹೇಳಿಕೆಗಳನ್ನು ಕೂಡ ಸರಿಯಾಗಿ ದಾಖಲೆ ಮಾಡಿ ಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ್ ಶಿವಪ್ಪ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ಲೋಕಾಯುಕ್ತ ವಿಶೇಷ ಅಭಿಯೋಜಕ ಟಿ.ವಿಜಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.