ಉಡುಪಿ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿರುವ ಕಾಲರಾ
ಬಿಸಿನೀರು, ಚೆನ್ನಾಗಿ ಬೇಯಿಸಿದ ಆಹಾರ ಸೇವಿಸಲು ಸೂಚನೆ
ಉಡುಪಿ, ಸೆ.23: ಮೂರು ವಾರಗಳ ಹಿಂದೆ ಜಿಲ್ಲೆಯ ಕಾರ್ಕಳ ತಾಲೂಕಿನ ಈದುವಿನಲ್ಲಿ ಮೊದಲು ಕಾಣಿಸಿಕೊಂಡ ಕಾಲರಾ ರೋಗ, ಕೆಲ ದಿನ ಆತಂಕ ಸೃಷ್ಟಿದ ಬಳಿಕ ಇದೀಗ ನಿಯಂತ್ರಣಕ್ಕೆ ಬರುತ್ತಿದೆ. ಕಳೆದ ಶನಿವಾರದಿಂದ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ ಎಂದು ಉಡುಪಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಲಾರಿ ಚಾಲಕರಾಗಿ ದುಡಿಯುತ್ತಿರುವ 36 ವರ್ಷ ಪ್ರಾಯದ ಯುವಕರೊಬ್ಬರಲ್ಲಿ ಮೊದಲು ಕಾಲರಾ ಸೋಂಕು ಕಂಡುಬಂದಿತ್ತು. ಅನಂತರ ಕಳೆದ ಶುಕ್ರವಾರದವರೆಗೆ 23 ಮಂದಿಯಲ್ಲಿ ಕಾಲರಾ ಪತ್ತೆಯಾಗಿತ್ತು. ಇವರಲ್ಲಿ 21 ಮಂದಿ ಚಿಕಿತ್ಸೆಯ ಬಳಿಕ ಸಂಪೂರ್ಣ ಗುಣಮುಖರಾಗಿದ್ದಾರೆ. ಉಳಿದಿಬ್ಬರು ಇಂದು ಸಂಜೆ ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ಗೊಳ್ಳುವ ನಿರೀಕ್ಷೆ ಇದೆ ಎಂದು ಡಾ.ನಾಗರತ್ನ ತಿಳಿಸಿದರು.
ಕಳೆದ ಶನಿವಾರ ಶಂಕಿತ ಕಾಲರಾಕ್ಕಾಗಿ ಆರು ಮಂದಿಯ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಪಡೆಯಲಾಗಿತ್ತು. ಎಲ್ಲಾ ಆರು ಮಂದಿಯ ಸ್ಯಾಂಪಲ್‌ಗಳ ಪರೀಕ್ಷಾ ವರದಿ ಇಂದು ನೆಗೆಟಿವ್ ಆಗಿ ಬಂದಿವೆ. ಇಂದು ಸಹ ಐದು ಸ್ಯಾಂಪಲ್‌ಗಳು ಪರೀಕ್ಷೆ ಗಾಗಿ ಬಂದಿವೆ. ಅದರ ವರದಿ ನಾಳೆ ಸಿಗುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.
ಹೀಗಾಗಿ ಜಿಲ್ಲೆಯಲ್ಲಿ ಈವರೆಗೆ ವರದಿಯಾಗಿರುವ 23 ಕಾಲರಾ ಪ್ರಕರಣಗಳಲ್ಲಿ ಕೇವಲ ಇಬ್ಬರು ಮಾತ್ರ ಸದ್ಯ ಡಾ.ಟಿಎಂಎ ಪೈ ಹಾಗೂ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದು ನಾಳೆಯೊಳಗೆ ಡಿಸ್ಚಾರ್ಜ್ ಆಗಲಿದ್ದಾರೆ. ಉಳಿದ 21 ಮಂದಿ ಕೆಎಂಸಿ ಮಣಿಪಾಲ, ವೆನ್‌ಲಾಕ್ ಮಂಗಳೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ ಎಂದರು.
ಕಳೆದ ಆಗಸ್ಟ್ ತಿಂಗಳಲ್ಲಿ ಪಶ್ಚಿಮ ಕರಾವಳಿಯ ಗೋವಾ ಬಂದರು ಪ್ರದೇಶದಲ್ಲಿ ಮೊದಲು ಕಾಲರಾ ವರದಿಯಾಗಿತ್ತು. ಅಲ್ಲಿ ಅದು ವ್ಯಾಪಕವಾಗಿ ಹರಡಿತ್ತು. ಬಳಿಕ ಕಾರವಾರ ಬಂದರು ಪ್ರದೇಶದಲ್ಲಿ ಕಾಲರಾ ಪ್ರಕರಣಗಳು ವರದಿಯಾಗಿದ್ದವು. ಮೀನುಗಾರಿಕಾ ಋತು ಆರಂಭಗೊಂಡ ಬಳಿಕ ಮಲ್ಪೆ ಬಂದರಿನ ಮೂಲಕ ಇದು ಜಿಲ್ಲೆಗೆ ಕಾಲಿರಿಸಿತ್ತು. ಜಿಲ್ಲೆಯಲ್ಲಿ ವರದಿ ಯಾದ 23 ಪ್ರಕರಣಗಳಲ್ಲಿ 8-10 ಪ್ರಕರಣಗಳು ಮಲ್ಪೆ ಬಂದರಿನಲ್ಲಿ ಕೆಲಸ ಮಾಡುವ ಮೀನುಗಾರರು ಅಥವಾ ಮೀನುಗಾರಿಕೆಗೆ ಸಂಬಂಧಿಸಿದ ಕೆಲಸಗಾರರಲ್ಲಿ ಇದು ಕಂಡುಬಂದಿತ್ತು ಎಂದವರು ಹೇಳಿದರು.
ಅದರಲ್ಲೂ ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಾಂಡಿಚೇರಿಯಿಂದ ಬಂದು ಮಲ್ಪೆ ಬಂದರಿನಲ್ಲಿ ಕೆಲಸ ಮಾಡುವವರಲ್ಲಿ ಇಂದು ಪತ್ತೆಯಾಗಿತ್ತು. ಇದೀಗ ಇವರೆಲ್ಲರೂ ಗುಣಮುಖರಾಗಿದ್ದು, ಹೆಚ್ಚಿನವರು ತಮ್ಮ ಊರುಗಳಿಗೆ ಮರಳಿದ್ದಾರೆ. ಮೊದಲ ಪ್ರಕರಣ ವರದಿಯಾದ ಈದುವಿನಲ್ಲಿ ಐದು ಪ್ರಕರಣ ಕಂಡುಬಂದಿತ್ತು ಎಂದು ಡಾ.ನಾಗರತ್ನ ತಿಳಿಸಿದರು.
ಶಂಕಿತ ಕಾಲರಾಕ್ಕಾಗಿ ಇಂದಿನವರೆಗೆ ಒಟ್ಟು 86 ಸ್ಯಾಂಪಲ್‌ಗಳನ್ನು ಪರೀಕ್ಷೆ ಗೊಳಪಡಿಸಲಾಗಿದ್ದು, 23 ಪಾಸಿಟಿವ್ ಆಗಿವೆ. 2015ರ ಬಳಿಕ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಲರಾ ಪ್ರಕರಣ ಪತ್ತೆಯಾಗಿರಲಿಲ್ಲ ಎಂದ ಅವರು, ಇಂದು ಪಡೆದ ಐವರು ಶಂಕಿತ ರೋಗಿಗಳ ಮಲದ ಸ್ಯಾಂಪಲ್‌ನ ಫಲಿತಾಂಶ ನಾಳೆ ಸಿಗಲಿದೆ ಎಂದರು.
ಸದ್ಯ ಇಬ್ಬರು ಮಾತ್ರ ಚಿಕಿತ್ಸೆಯಲ್ಲಿದ್ದು, ಐದು ಸ್ಯಾಂಪಲ್‌ಗಳ ವರದಿ ಮಾತ್ರ ಬರಬೇಕಿದ್ದರೂ, ಈಗಲೇ ಜಿಲ್ಲೆಯಲ್ಲಿ ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲು ಸಾದ್ಯವಿಲ್ಲ. ಅದಕ್ಕೆ ಇನ್ನೂ ಕೆಲವು ದಿನ ಕಾಯಲೇ ಬೇಕಾಗುತ್ತದೆ. ಉಪ್ಪು ನೀರಿ ನಲ್ಲಿ ಹೆಚ್ಚು ಸಕ್ರಿಯವಾಗಿರುವ ಕಾಲರಾ ಬ್ಯಾಕ್ಟೀರಿಯಾಗಳು ಚೆನ್ನಾಗಿ ತೊಳೆದು ಬಳಸದ, ನಾವು ತಿನ್ನುವ ತರಕಾರಿ, ಹಣ್ಣುಹಂಪಲು, ಮೀನು, ಮರುವಾಯಿ ಸೇರಿದಂತೆ ಸಮುದ್ರ ಉತ್ಪನ್ನಗಳು, ಮಾಂಸದ ಮೂಲಕ ದೇಹವನ್ನು ಪ್ರವೇಶಿಸಬಹುದಾಗಿದೆ ಎಂದರು.
ಹೀಗಾಗಿ ಸಾರ್ವಜನಿಕರು ಸ್ವಚ್ಛತೆಗೆ ವಿಶೇಷ ಗಮನ ಹರಿಸಿ, ಪ್ರತಿಬಾರಿ ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಂಡು, ನೀರಿನಲ್ಲಿ ಚೆನ್ನಾಗಿ ತೊಳೆದ ಹಣ್ಣು ಹಂಪಲು, ಚೆನ್ನಾಗಿ ಬೇಯಿಸಿದ ತರಕಾರಿ, ಮೀನು, ಮಾಂಸಗಳನ್ನೇ ಬಳಸಿದರೆ ಈ ಸಾಂಕ್ರಾಮಿಕ ರೋಗದಿಂದ ದೂರವಿರಲು ಸಾಧ್ಯ ಎಂದು ಡಾ.ನಾಗರತ್ನ ತಿಳಿಸಿದರು.