ಉಡುಪಿ: ಡಿ.14ರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕೊರಿಯನ್ ತಂಡದಿಂದ ಕ್ರಿಸ್ಮಸ್ ಕ್ರಿಸ್ತೋತ್ಸವ- 2024
ಉಡುಪಿ: ಉಡುಪಿಯ ಯುನೈಟೆಡ್ ಕ್ರಿಶ್ಚಿಯನ್ ಫೋರಂ, ಲೊಂಬಾರ್ಡ್ ಮಿಶನ್ ಆಸ್ಪತ್ರೆ, ಕರ್ನಾಟಕ ಯುವಕ ಸಂಘ ಮತ್ತು ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಹಯೋಗದೊಂದಿಗೆ ಕ್ರಿಸ್ಮಸ್ ಕ್ರಿಸ್ತೋತ್ಸವ -2024 ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಡಿ.14ರ ಶನಿವಾರ ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜನಾ ಸಮಿತಿಯ ಸಂಚಾಲಕ ಡಾ.ಸುಶೀಲ್ ಜತ್ತನ್ನ ಹೇಳಿದ್ದಾರೆ.
ಜಿಲ್ಲೆಯಲ್ಲಿ 60 ಕಲಾವಿದರ ಕೊರಿಯನ್ ತಂಡ ಪ್ರಪ್ರಥಮ ಬಾರಿಗೆ ‘ಕ್ರಿಸ್ಮಸ್ ಕ್ರಿಸ್ತೋತ್ಸವ-2024’ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದು, ಜಿಲ್ಲೆಯ ಜನತೆಗೆ ಸಾಂಸ್ಕೃತಿಕ ಮತ್ತುಆಧ್ಯಾತ್ಮಿಕ ಹಬ್ಬದ ರಸದೂಟವನ್ನು ಉಣ ಬಡಿಸಲಿದೆ ಎಂದು ಶುಕ್ರವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಡಾ.ಜತ್ತನ್ನ ಮಾಹಿತಿ ನೀಡಿದರು.
ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಮಾತನಾಡಿ, ಇಟಾಲಿಯನ್ ಮತ್ತು ಲ್ಯಾಟಿನ್ ಭಾಷೆಯ ಕಂಟಾಟ ಎಂಬ ಪದವು ಕೋರಸ್ ಅಥವಾ ಸಂಗೀತದೊಂದಿಗೆ ಕವಿತೆ ಅಥವಾ ಕಥೆಗೆ ಸಂಗೀತ ಸಂಯೋಜನೆ ಮಾಡುವುದು ಎಂದರ್ಥ. ಕ್ರಿಸ್ಮಸ್ ಕಂಟಾಟವು ಯೇಸುಕ್ರಿಸ್ತರ ಜನನದ ಕಥೆಯನ್ನು ಹೇಳುತ್ತದೆ. ಈ ಚಾರಿತ್ರಿಕ ಘಟನೆಯನ್ನು ನೃತ್ಯರೂಪಕದ ಮೂಲಕ ಸಾದರಪಡಿಸುವುದೇ ಕ್ರಿಸ್ಮಸ್ ಕ್ರಿಸ್ತೋತ್ಸವ ಅಥವಾ ಕ್ರಿಸ್ಮಸ್ ಕಂಟಾಟ ಎಂದು ವಿವರಿಸಿದರು.
60 ಕಲಾವಿದರ ಈ ತಂಡವು, ಕೆಲವು ಕೊರಿಯನ್ ಕಲಾವಿದರನ್ನು ಒಳಗೊಂಡಿದೆ. ಕನ್ನಡ ಭಾಷೆಯ ದ್ವನಿಮುದ್ರಿತ ಹಾಡುಗಳು ಮತ್ತು ಸಂಗೀತದಿಂದ ಸಮೃದ್ಧವಾದ ಈ ಪ್ರದರ್ಶನವು 60 ನಿಮಿಷಗಳ ಸಂಗೀತ ನಾಟಕವನ್ನು ಒಳಗೊಂಡಿದೆ. ಈ ಕಾರ್ಯಕ್ರಮ ದ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಹೋಲುತ್ತದೆ. ಇದು ಪಾಲ್ಗೊಳ್ಳುವ ಎಲ್ಲರಿಗೂ ಎಂದೂ ಮರೆಯಲಾಗದ ಅನುಭವವನ್ನು ನೀಡಲಿದೆ ಎಂದು ವಂ.ಡೇಸಾ ತಿಳಿಸಿದರು.
ಭಾರತದಲ್ಲಿ 2014ರಲ್ಲಿ ಆರಂಭವಾದ ಕಂಟಾಟವನ್ನು ಈವರೆಗೆ 30 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 1,700 ಸ್ಥಳಗಳಲ್ಲಿ ಈ ತಂಡ ಪ್ರದರ್ಶನ ನೀಡಿದೆ. ಈ ತಂಡ ಕೊರಿಯಾ, ಯುಎಸ್ಎ ಮತ್ತು ಇತರ ದೇಶಗಳಲ್ಲಿ ಪ್ರದರ್ಶನಗಳ ಮೂಲಕ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ ಎಂದರು.
ಕ್ರಿಸ್ಮಸ್ ಕ್ರಿಸ್ತೋತ್ಸವ ಕಾರ್ಯಕ್ರಮ ಸಂಜೆ 6ಗಂಟೆಗೆ ಆರಂಭವಾಗಲಿದ್ದು, ಸ್ಥಳೀಯ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಪರಿಸರ, ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡುವ ನೃತ್ಯಗಳನ್ನು ಪ್ರದರ್ಶಿಸಲಿದ್ದು, ಕ್ರಿಸ್ಮಸ್ ಗೀತೆಗಳನ್ನು ಹಾಡಲಿದ್ದಾರೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಉಡುಪಿ ಬಿಷಪ್ ಅ.ವಂ. ಜೆರಾಲ್ಡ್ ಐಸಾಕ್ ಲೋಬೊ, ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ ಬಿಷಪ್ ಅ.ವಂ. ಹೇಮಚಂದ್ರ ಕುಮಾರ್, ಬೆಂಗಳೂರಿನ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಥಿಯಾಲಜಿ ಪ್ರಾಚಾರ್ಯ ವಂ. ಸೈಮನ್ ಅಬ್ರಾಹಾಂ ಭಾಗವಹಿಸಲಿದ್ದಾರೆ.
ಕೊರಿಯನ್ ತಂಡದಿಂದ ಪ್ರದರ್ಶನಗೊಳ್ಳುವ ನೃತ್ಯರೂಪಕ, ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಇದು ಉಡುಪಿಯ ಎಲ್ಲಾ ಕ್ರಿಶ್ಚಿಯನ್ ಸಭೆ, ಸಂಘಟನೆಗಳು ಜೊತೆಗೂಡಿ ಆಯೋಜಿಸುವ ವಿಶಿಷ್ಠ ಕಾರ್ಯಕ್ರಮ ಎಂದು ವಂ.ಡೆನಿಸ್ ಡೇಸಾ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಉಡುಪಿ ಉಪಾಧ್ಯಕ್ಷ ಪ್ರಶಾಂತ್ ಜತ್ತನ್ನ, ಉಡುಪಿ ಶೋಕಮಾತಾ ಚರ್ಚಿನ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್, ಬ್ರಹ್ಮಾವರ ಸೈಂಟ್ ಮೇರಿಸ್ ಸೀರಿಯನ್ ಕ್ಯಾಥೆಡ್ರಲ್ನ ವಿಕಾರ್ ಜನರಲ್ ವಂ. ಮಥಾಯಿ ಹಾಗೂ ಇತರರು ಉಪಸ್ಥಿತರಿದ್ದರು.