ಸಿನೆಮಾ ಪ್ರಭಾವಶಾಲಿ ಮಾಧ್ಯಮ: ಸುಧೀರ್ ಶಾನುಭೋಗ
'ಅಮೃತ ವರ್ಷಿಣಿ ' ಕಾರ್ಕಳ ಚಲನಚಿತ್ರ ಉತ್ಸವಕ್ಕೆ ಚಾಲನೆ
ಕಾರ್ಕಳ, ಜು.11: 'ಸಿನೆಮಾ ಒಂದು ಪ್ರಭಾವಶಾಲಿ ಮಾಧ್ಯಮವಾಗಿದ್ದು, ಅದನ್ನು ಸೃಜನಶೀಲವಾಗಿ ಪ್ರೇಕ್ಷಕರಿಗೆ ತಲುಪಿಸಿದಾಗ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ಇಂದು ಕ್ಲಾಸ್ ಮತ್ತು ಮಾಸ್ ಎರಡೂ ಬ್ಲೆಂಡ್ ಆಗಿರುವ ಸಿನೆಮಾಗಳ ಅಗತ್ಯ ಇದೆ' ಎಂದು ಸಿನೆಮಾ ನಿರ್ದೇಶಕ ಕಾರ್ಕಳ ಸುಧೀರ್ ಶಾನುಭೋಗ ಅಭಿಪ್ರಾಯಿಸಿದ್ದಾರೆ.
ಕಾರ್ಕಳದಲ್ಲಿ ರಂಗ ಸಂಸ್ಕೃತಿ ಸಂಸ್ಥೆಯು ಪ್ರಕಾಶ್ ಹೋಟೆಲಿನ ಉತ್ಸವ ಸಭಾಂಗಣದಲ್ಲಿ ಆಯೋಜಿಸಿರುವ
'ಅಮೃತ ವರ್ಷಿಣಿ ' ಕಾರ್ಕಳ ಚಲನಚಿತ್ರ ಉತ್ಸವದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ರಾಜ್ಯಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕಿ ಸಾವಿತ್ರಿ ಮನೋಹರ್ ಅವರು ದೀಪ ಬೆಳಗಿಸಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು.
ರಂಗ ಸಂಸ್ಕೃತಿ ಕಾರ್ಕಳ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಎಸ್.ನಿತ್ಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು.
ರಂಗ ಸಂಸ್ಕೃತಿಯ ಉಪಾಧ್ಯಕ್ಷ ಟಿ.ರಾಮಚಂದ್ರ ನಾಯಕ್ ವೇದಿಕೆಯಲ್ಲಿದ್ದರು. ಶಿಕ್ಷಕ ಗಣೇಶ್ ಜಾಲ್ಸೂರು ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಂಚಾಲಕ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿದರು.
ಮೂರು ದಿನಗಳ ಈ ಚಲನಚಿತ್ರೋತ್ಸವದ ಮೊದಲ ದಿನ ಅನನ್ಯ ಕಾಸರವಳ್ಳಿ ನಿರ್ದೇಶನದ ಪ್ರಶಸ್ತಿ ವಿಜೇತ 'ಹರಿಕಥಾ ಪ್ರಸಂಗ' ಕನ್ನಡ ಸಿನೆಮಾ ಪ್ರದರ್ಶನಗೊಂಡಿತು.