ಮಣಿಪುರ ಹಿಂಸಾಚಾರ ಖಂಡಿಸಿ ಸಿಐಟಿಯು ಪ್ರತಿಭಟನೆ
ಉಡುಪಿ, ಜು.25: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಹಿಂಸಾಚಾರವನ್ನು ಖಂಡಿಸಿ ಸಿಐಟಿಯು ಉಡುಪಿ ತಾಲೂಕು ಸಂಚಾಲನ ಸಮಿತಿ ಹಾಗೂ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಇಂದು ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಹಿರಿಯ ಚಿಂತಕ ಪ್ರೊ.ಫಣಿರಾಜ್ ಮಾತನಾಡಿ, ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಭಾರತ ದೇಶಕ್ಕೆ ಉಂಟು ಮಾಡಿರುವ ಹಾನಿ ಎಣಿಕೆಗೆ ಸಿಗಲಾರದು. ಮೂರು ತಿಂಗಳಿನಿಂದ ನಡೆಯುತ್ತಿ ರುವ ಹಿಂಸಾಚಾರಕ್ಕೆ ಬಿಜೆಪಿ ಸರಕಾರದ ಬೆಂಬಲ ಇದೆ. ನಾವೆಲ್ಲರೂ ಒಂದಾಗಿ ಇಂತಹ ಸರಕಾರಿ ಪ್ರಾಯೋಜಿತ ಬರ್ಬರತೆಯನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸಂಜೀವ ಬಳ್ಕೂರು, ವಿಶ್ವನಾಥ ಕೆ., ಮುರಳಿ, ರಮೇಶ್, ಉಮೇಶ್ ಕುಂದರ್, ಸದಾಶಿವ ಬ್ರಹ್ಮಾವರ, ಸುಭಾಶ್ ನಾಯಕ್, ವಿದ್ಯಾರಾಜ್, ಮೋಹನ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಸರೋಜ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್., ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ಮೊದಲಾದವರು ಉಪಸ್ಥಿತರಿದ್ದರು.