ಉಡುಪಿಯಲ್ಲಿ ಕೈಗೊಂಡ ಮುಂಜಾಗೃತಾ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ
ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿ ವೀಡಿಯೊ ಸಂವಾದ
ಬೆಂಗಳೂರು: ಭಾರೀ ಮಳೆಯ ಸಾಧ್ಯತೆಯ ಬಗ್ಗೆ ಎಚ್ಚರಿಕೆ ವಹಿಸಿ ಉಡುಪಿ ಜಿಲ್ಲೆಯಲ್ಲಿ ಮೊದಲೇ ಮುಂಜಾಗೃತಾ ಕ್ರಮ ಕೈಗೊಂಡ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು.
ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿ ದಂತೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಇಂದು ಬೆಂಗಳೂರಿನಿಂದ ವೀಡಿಯೊ ಸಂವಾದ ನಡೆಸಿದರು.
ಉಡುಪಿ ಜಿಲ್ಲೆಯಲ್ಲಿ ಬಹಳ ಮೊದಲೇ ವಾರ್‌ರೂಂಗಳನ್ನು ತೆರೆಯ ಲಾಗಿತ್ತು. ಇದರಿಂದ ಸಾಕಷ್ಟು ಅನಾಹುತಗಳನ್ನು ತಪ್ಪಿಸಿದ್ದೇವೆ. ಆದರೆ ಕಾಲುಸಂಕ ಹಾಗೂ ಇತರೆ ಮಳೆ ಅಪಘಾತಗಳಿಂದ ಒಟ್ಟು 9 ಸಾವು ಸಂಭವಿಸಿವೆ ಎಂದು ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ವೇಳೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಮುಂಜಾಗ್ರತಾ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು ಇದೇ ಕ್ರಮ ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ ಎಂದರು. ಸಂಬಂಧಪಟ್ಟ ಅಧಿಕಾರಿಗಳು ಮಳೆ ಸಾಧ್ಯತೆ, ಮಳೆಯ ಬಿರುಸಿನ ಬಗ್ಗೆ ಪ್ರತಿದಿನ ಪತ್ರಿಕಾಗೋಷ್ಠಿ ನಡೆಸಬೇಕು. ಕಾಲು ಜಾರುವ ಕಡೆಗಳಲ್ಲಿ ಹೋಗಬಾರದು, ತುಂಬಿ ಹರಿವ ನದಿಗಳನ್ನು ಹಾಯಬಾರದು ಎಂದು ಸೂಚಿಸಬೇಕು. ಸಾವು ತಡೆಗಟ್ಟಲು ಹೆಚ್ಚಿನ ಶ್ರಮವಹಿಸಬೇಕು ಎಂದರು.
ಭೂ ಕುಸಿತ ಆಗಬಹುದಾದ ಸ್ಥಳಗಳ ಬಗ್ಗೆ ಒಂದು ಹಂತಕ್ಕೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇರುತ್ತದೆ. ಪೊಲೀಸ್, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮಧ್ಯೆ ಸಮನ್ವಯವಿದ್ದರೆ ಸಾಕಷ್ಟು ಜೀವಹಾನಿ ತಪ್ಪಿಸಬಹುದು. ಮಣ್ಣು ಕುಸಿತವಾಗುವ ಸ್ಥಳಗಳ ಬಗ್ಗೆ ಇಲಾಖೆಗಳಿಗೆ ಮಾಹಿತಿ ಇರುತ್ತದೆ. ಕಾಳಜಿಯಿಂದ ವರ್ತಿಸಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಭೆಯ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.