ಹಿಜಾಬ್ ನಿಷೇಧ ಹಿಂಪಡೆಯಲು ಸಿಎಂ ಸಿದ್ದರಾಮಯ್ಯ ಸೂಚನೆ: ಹರ್ಷ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿ
ಫೈಲ್ ಫೋಟೊ
ಉಡುಪಿ: ಹಿಜಾಬ್ ನಿಷೇಧ ಹಿಂಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿರುವುದಕ್ಕೆ ಹಿಜಾಬ್ ಪರವಾಗಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ನಾಲ್ವರು ವಿದ್ಯಾರ್ಥಿನಿಯರಲ್ಲಿ ಒಬ್ಬರಾದ ತೆಹ್ರೀನ್ ಬೇಗಮ್ ಹರ್ಷ ವ್ಯಕ್ತಪಡಿಸಿದ್ದಾರೆ.
‘‘ಸಾಂವಿಧಾನಿಕ ಮೂಲಭೂತ ಹಕ್ಕಾದ ಶಿರವಸ್ತ್ರ ನಿಷೇಧ ಹಿಂಪಡೆದು ಈ ರಾಜ್ಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟ ರಾಜ್ಯ ಸರಕಾರಕ್ಕೆ ಧನ್ಯವಾದಗಳು. ಈ ಹಿಂದಿನ ಸರಕಾರ ನಮ್ಮ ಶಿಕ್ಷಣ ಅರ್ಧದಲ್ಲೆ ಮೊಟಕುಗೊಳ್ಳುವಂತೆ ಮಾಡಿದಾಗ, ಇಡೀ ಸಮುದಾಯ ಇದರ ವಿರುದ್ಧ ಧ್ವನಿ ಎತ್ತಿತ್ತು. ಆದರೆ ಯಾವುದೇ ಪ್ರಯೋಜನ ಉಂಟಾಗಲಿಲ್ಲ. ಇದೀಗ ಮುಖ್ಯಮಂತ್ರಿಯ ಆದೇಶ ಈ ನಿಟ್ಟಿನಲ್ಲಿ ಆಶಾಕಿರಣವಾಗಿದೆ. ನಾವು ನಮಗೆ ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕುಗಳ ಅನುಭವಿಸುವುದರೊಂದಿಗೆ ಹಲವು ಸಾಧನೆಗಳ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ತೋರಿಸಲು ಸದಾ ಸಿದ್ಧರಿದ್ದೇವೆ’’ ಎಂದು ಹಿಜಾಬ್ ನಿಷೇಧದ ಕಾರಣ ವಿದ್ಯಾಭ್ಯಾಸವೇ ಮೊಟಕುಗೊಂಡಿರುವ ತೆಹ್ರೀನ್ ಬೇಗಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘‘ನಾನು, ನನ್ನ ವಸ್ತ್ರ, ನನ್ನ ಹಕ್ಕು ಅದರಲ್ಲಿ ಯಾರಿಗೂ ವಂಚನೆ ಮಾಡುವ ಯಾವುದೇ ಅವಕಾಶ ಇಲ್ಲ ಎಂಬುದನ್ನು ರಾಜ್ಯ ಸರಕಾರ ಎತ್ತಿ ಹಿಡಿದಿದೆ. ಮುಂದೆಯೂ ಸಂವಿಧಾನದ ಆಶಯಕ್ಕೆ ಸಾಥ್ ನೀಡುವ ಇಂತಹ ಸರಕಾರ ಅಧಿಕಾರಕ್ಕೆ ಬಂದು ನಮ್ಮೆಲ್ಲಾ ಹೆಣ್ಣು ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಲಿ. ಎಲ್ಲರಿಗೂ ಶಿಕ್ಷಣದ ಮುಖಾಂತರ ಬದಲಾವಣೆ ತರಲು ಅವಕಾಶ ಮಾಡಿ ಕೊಡಲಿ ಎಂಬುದು ನಮ್ಮ ಆಶಯ’’ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸರಕಾರ ಕಳೆದ ವರ್ಷ ಸರಕಾರಿ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ಮೂಲಕ ಹಿಜಾಬ್ ಧರಿಸುವುದಕ್ಕೆ ನಿರ್ಬಂಧ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆ ವೇಳೆ ಕಾಲೇಜು ವಿದ್ಯಾರ್ಥಿನಿಯರಾಗಿದ್ದ ತೆಹ್ರೀನ್ ಬೇಗಮ್ ಸಹಿತ ನಾಲ್ವರು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸಂದರ್ಭ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿದ್ದ ತೆಹ್ರೀನ್ ಬೇಗಮ್ರ ವಿದ್ಯಾಭ್ಯಾಸವೇ ಹಿಜಾಬ್ ಕಾರಣಕ್ಕೆ ಮೊಟಕುಗೊಂಡಿತ್ತು.