ಕಮ್ಯುನಿಸ್ಟ್ ನಾಯಕ ಎಸ್.ವಿ.ವೇಳಣಕರ್ ನಿಧನ
ಕಾರ್ಕಳ, ಅ.29: ಹಿರಿಯ ಕಮ್ಯೂನಿಸ್ಟ್ ನಾಯಕ, ಮೃದುಭಾಷಿ, ಸಜ್ಜನ ಎಸ್.ವೆಂಕಟೇಶ್ ವೇಳಣಕರ್ ರವಿವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ಪ್ರಾಯವಾಗಿದ್ದು, ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕಾರ್ಕಳ ತಾಲೂಕಿನ ದುರ್ಗದಲ್ಲಿ 1940ರಲ್ಲಿ ಜನಿಸಿದ ವೇಳಣಕರ್, ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪದವಿ ಹಾಗೂ ಉತ್ತರ ಪ್ರದೇಶದ ಆಗ್ರಾ ವಿಶ್ವವಿದ್ಯಾಲಯದಲ್ಲಿ ಹಿಂದಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಕೆಲಸಮಯ ಪ್ರಾಧ್ಯಾಪಕರಾಗಿ ದುಡಿದು, 1968ರಲ್ಲಿ ಸಮಾಜವಾದ ಹಾಗೂ ಕಮ್ಯುನಿಸ್ಟ್ ಸಿದ್ದಾಂತದಿಂದ ಪ್ರಭಾವಿತರಾಗಿ ಹೋರಾಟ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕರಾದ ಬಿ.ವಿ.ಕಕ್ಕಿಲ್ಲಾಯರ ನೇತೃತ್ವ ದಲ್ಲಿ ಹಲವಾರು ಹೋರಾಟಗಳಲ್ಲಿ ಇವರು ಭಾಗವಹಿಸಿದ್ದರು. ಕಮ್ಯುನಿಸ್ಟ್ ಪಕ್ಷದಲ್ಲಿ ಸುಮಾರು 30 ವರ್ಷಗಳ ಕಾಲ ಕೆಲಸ ಮಾಡಿದ್ದರು. ರೈತರ ಚಳುವಳಿ, ಭೂಮ ಸೂದೆ ಚಳುವಳಿ ಮತ್ತು ಅದನ್ನು ಜಾರಿಗೊಳಿಸುವುದು ಮುಂತಾದ ಬಡವರ ಸಾಮಾಜಿಕ ನ್ಯಾಯದ ಪರವಾಗಿ ಹೋರಾಡಿದ್ದರು.
ಟ್ರೇಡ್ ಯೂನಿಯನ್ ಮುಖಾಂತರ ಬೀಡಿ ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸಿ, ಅವರಿಗೆ ಸರಿಯಾದ ವೇತನ ಕೊಡಿಸುವ ಹೋರಾಟ ನಡೆಸಿ ಅದರಲ್ಲಿ ಸಫಲತೆಯನ್ನು ಪಡೆದಿದ್ದರು. ತೆಳ್ಳಾರಿನಲ್ಲಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗ ಲೆಂದು ಸರಕಾರಿ ಹೈಸ್ಕೂಲ್ ಪ್ರಾರಂಭಿಸುವಲ್ಲಿ ವೆಂಕಟೇಶ್ ವೇಳಮಕರ್ ಪ್ರಧಾನ ಪಾತ್ರ ವಹಿಸಿದ್ದರು.