ಜನನ-ಮರಣ ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯ ನೋಂದಣಿ ಮಾಡಿಸಿ: ಎಡಿಸಿ ಮಮತಾದೇವಿ
ಉಡುಪಿ: ಪ್ರತಿಯೊಬ್ಬರೂ ಜನನ -ಮರಣ ನೋಂದಣಿಯನ್ನು ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ಮಾಡಿಸಿ ಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದ್ದಾರೆ.
ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜನನ-ಮರಣ ಪ್ರಮಾಣ ಪತ್ರವು ಮಾನವನ ಪ್ರತಿಯೊಂದು ವಿಶೇಷ ಹಂತಗಳಲ್ಲಿ ಅತ್ಯವಶ್ಯವಾಗಿದೆ. ಜನನ-ಮರಣ ಮತ್ತು ನಿರ್ಜೀವ ಜನನಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದ್ದು, 20 ದಿನಗಳ ಒಳಗಾಗಿ ಯಾವುದೇ ಶುಲ್ಕ ವಿಲ್ಲದೇ ನೋಂದಾಯಿಸಬಹುದು. 21 ದಿನದ ನಂತರ 30 ದಿನದವರೆಗೆ 1 ರೂ. ದಂಡ, 30 ದಿನದಿಂದ 1 ವರ್ಷದವರೆಗೆ 5 ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಮಗು ಜನನವನ್ನು ಹೆಸರಿಲ್ಲದೇ ನೋಂದಣಿ ಮಾಡಲು ಅವಕಾಶವಿದ್ದು, ಈ ರೀತಿ ನೋಂದಾಯಿಸಿದ್ದಲ್ಲಿ 12 ತಿಂಗಳ ಒಳಗಾಗಿ ಮಗುವಿನ ಹೆಸರನ್ನು ಜನನ ಪುಸ್ತಕದಲ್ಲಿ ಯಾವುದೇ ಶುಲ್ಕವಿಲ್ಲದೇ ನೋಂದಣಿ ಮಾಡಲು ಅವಕಾಶವಿದೆ. ನಂತರದ 15 ವರ್ಷದ ಒಳಗಾಗಿ ವಿದಾಯಕ ತಡ ಶುಲ್ಕವನ್ನು ಪಾವತಿಸಿ, ಹೆಸರನ್ನು ನೋಂದಾಯಿಸಬಹುದಾಗಿದೆ ಎಂದರು.
ಜನನ-ಮರಣ ನೋಂದಣಿ ದಾಖಲಾತಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗೆ ಅವಕಾಶವಿಲ್ಲ. ಆದರೆ ಕೆಲವೊಂದು ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶವಿದ್ದು, ಅಂತಹ ತಿದ್ದುಪಡಿಗೆ ದುರುದ್ದೇಶ ವಿರಬಾರದು ಎಂದರು.
ವಿದೇಶಗಳಲ್ಲಿ ಜನಿಸಿದ ಮಗುವಿನ ಜನನವನ್ನು ದೇಶದ ಭಾರತೀಯ ರಾಯಭಾರಿ ಕಚೇರಿಯಲ್ಲಿ ನೋಂದಾವಣಿ ಮಾಡಿಸಲು ಅವಕಾಶವಿದೆ. ಆದರೆ ಶಿಶುವಿನ ತಂದೆ ತಾಯಿಯರು ಭಾರತ ದೇಶದಲ್ಲಿ ನೆಲೆಸುವ ಉದ್ದೇಶದಿಂದ ಭಾರತಕ್ಕೆ ಹಿಂದಿರುಗಿದಲ್ಲಿ, ಹಿಂದಿರುಗಿದ 60 ದಿನಗಳ ಒಳಗಾಗಿ ಶಿಶುವಿನ ಜನನವನ್ನು ನೋಂದಾವಣೆ ಮಾಡಿಸಬೇಕು ಎಂದರು.
ಜನನ-ಮರಣ ಸಕ್ಷಮ ಪ್ರಾಧಿಕಾರವಾದ ಎಲ್ಲಾ ಸ್ಥಳೀಯ ಸಂಸ್ಥೆಗಳು ಸರಕಾರಿ ಆಸ್ಪತ್ರೆಗಳು, ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯವನ್ನು ಕಡ್ಡಾಯವಾಗಿ ಮಾಡುವುದರೊಂದಿಗೆ ಶೇ. 100 ರಷ್ಟು ಪ್ರಗತಿ ಸಾಧಿಸಬೇಕು ಎಂದ ಅವರು, ಜನನ-ಮರಣ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದಾಗ ವಿಳಂಬಲ್ಲದೇ ಕಾಲಮಿತಿ ಯೊಳಗೆ ಪ್ರಮಾಣಪತ್ರ ವಿತರಿಸಬೇಕೆಂದು ಸೂಚನೆ ನೀಡಿದರು.
ಪ್ರಸ್ತುತ ಸಾಲಿನಲ್ಲಿ ಈವರೆಗೆ 1075 ಗ್ರಾಮಾಂತರದಲ್ಲಿ, 10,233 ನಗರ ಪ್ರದೇಶದಲ್ಲಿ ಸೇರಿದಂತೆ ಒಟ್ಟು 11,308 ಜನನ ನೋಂದಣಿಯಾಗಿದೆ. 5897 ಗ್ರಾಮಾಂತರದಲ್ಲಿ, 4105 ಪಟ್ಟಣ ಪ್ರದೇಶದಲ್ಲಿ ಒಟ್ಟು 10,112 ಮರಣ ಪ್ರಕರಣಗಳು ನೋಂದಣಿಯಾಗಿವೆ. 67 ನಿರ್ಜಿವ ನೋಂದಣಿ ಯಾಗಿದೆ. ಲಿಂಗಾನುಪಾತ 958 ಇದ್ದು, ಮರಣ ಪ್ರಮಾಣವು ಶೇ.7.94 ಇರುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ ಗಡಾದ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಮ್. ದೊಡ್ಡಮನಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.