ಅಂಚೆ ನೌಕರರ 26ನೇ ಕರ್ನಾಟಕ ವೃತ್ತ ಜಂಟಿ ಸಮ್ಮೇಳನಕ್ಕೆ ಚಾಲನೆ
ಉಡುಪಿ: ನ್ಯಾಶನಲ್ ಅಸೋಸಿಯೇಶನ್ ಆಫ್ ಪೋಸ್ಟಲ್ ಎಂಪ್ಲಾಯೀಸ್ ಗ್ರೂಪ್ ಸಿ, ನ್ಯಾಶನಲ್ ಯೂನಿಯನ್ ಆಫ್ ಪೋಸ್ಟಲ್ ಎಂಪ್ಲಾಯೀಸ್, ಪೋಸ್ಟ್ಮೆನ್ ಆ್ಯಂಡ್ ಎಂಟಿಎಸ್, ನ್ಯಾಶನಲ್ ಯೂನಿ ಯನ್ ಆಫ್ ಗ್ರಾಮೀಣ ಡಕ್ ಸೇವಕ್ ಕರ್ನಾಟಕ ವೃತ್ತ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ 26ನೇ ಕರ್ನಾಟಕ ವೃತ್ತ ಸಮ್ಮೇಳನಕ್ಕೆ ರವಿವಾರ ಚಾಲನೆ ನೀಡಲಾಯಿತು.
ಸಮ್ಮೇಳನವನ್ನು ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಅಂಚೆ ಇಲಾಖೆಯಲ್ಲಿ ಅರೆ ಸರಕಾರಿ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸರಕಾರ ಪೂರ್ಣಕಾಲಿಕ ನೌಕರರನ್ನಾಗಿ ನೇಮಕ ಮಾಡಬೇಕು. ಪ್ರಸ್ತುತ ಅಂಚೆ ಇಲಾಖೆ ನಮ್ಮ ಜನಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅದೇ ರೀತಿ ಅದರ ನೌಕರರು ಕೂಡ ಮುಖ್ಯ ವಾಗುತ್ತಿದ್ದಾರೆ. ಜಾತಿ, ಮತವನ್ನು ಮೀರಿ ಸಂಘಟಿತರಾದಾಗ ನಮ್ಮ ಸಂಘಟನೆ ಇನ್ನಷ್ಟು ಬಲಯುತವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎನ್ಎಪಿಇ ಗ್ರೂಪ್ ಸಿ ಪ್ರಧಾನ ಕಾರ್ಯದರ್ಶಿ ಶಿವಾಜಿ ವಸಿ ರೆಡ್ಡಿ, ಎನ್ಯುಪಿಇ ಪೋಸ್ಟ್ಮೆನ್ ಆ್ಯಂಡ್ ಎಂಟಿಎಸ್ ಪ್ರಧಾನ ಕಾರ್ಯದರ್ಶಿ ನಿಸಾರ್ ಮುಜಾವರ್, ನ್ಯಾಶನಲ್ ಯೂನಿಯನ್ ಆಫ್ ಗ್ರಾಮೀಣ ಡಕ್ ಸೇವಕ್ ಪ್ರಧಾನ ಕಾರ್ಯದರ್ಶಿ ಪಿ.ಯು. ಮುರಳೀಧರನ್, ಎಫ್ಎನ್ಪಿಓ ಮಾಜಿ ಕಾರ್ಯದರ್ಶಿ ಟಿ.ಎನ್.ರಾಹತೆ, ಅಂಚೆ ಕಚೇರಿಯ ನಿವೃತ್ತ ಹಿರಿಯ ಅಧೀಕ್ಷಕ ನವೀನ್ ಚಂದರ್, ಉಡುಪಿ ಅಂಚೆ ವಿಭಾಗದ ಅಧೀಕ್ಷಕ ರಮೇಶ್ ಪ್ರಭು ಮಾತನಾಡಿದರು.
ಅಧ್ಯಕ್ಷತೆಯನ್ನು ಎನ್ಎಪಿಇ ಗ್ರೂಪ್ ಸಿ ಕರ್ನಾಟಕ ವೃತ್ತ ಅಧ್ಯಕ್ಷ ಮೋಹನ್ ಕುಮಾರ್ ಕಟ್ಟಿಮನಿ ವಹಿಸಿದ್ದರು. ಗ್ರೂಪ್ ಸಿ ಕರ್ನಾಟಕ ವೃತ್ತ ಕಾರ್ಯದರ್ಶಿ ಎಸ್.ಖಂಡೋಜಿ ರಾವ್, ಎನ್ಯುಪಿಇ ಪೋಸ್ಟ್ಮೆನ್ ಆ್ಯಂಡ್ ಎಂಟಿಎಸ್ ಕರ್ನಾಟಕ ವೃತ್ತ ಅಧ್ಯಕ್ಷ ಪಿ.ಸತೀಶ್, ಕಾರ್ಯದರ್ಶಿ ಆರ್. ಮಹಾದೇವ್, ನ್ಯಾಶನಲ್ ಯೂನಿಯನ್ ಆಫ್ ಗ್ರಾಮೀಣ ಡಕ್ ಸೇವಕ್ ಕರ್ನಾಟಕ ವೃತ್ತ ಅಧ್ಯಕ್ಷ ಮೋಹನ್ ರೆಡ್ಡಿ ದೇಸಾಯಿ, ಪ್ರಧಾನ ಕಾರ್ಯದರ್ಶಿ ಎಂ.ಪಿ. ಚಿತ್ರಸೇನಾ, ಡಿ.ವಿ.ಪಡುಬಿದ್ರೆ ಉಪಸ್ಥಿತರಿದ್ದರು.
ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಸುರೇಶ್ ಕೆ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ಎಪಿಇ ಗ್ರೂಪ್ ಸಿ ಉಡುಪಿ ಕಾರ್ಯದರ್ಶಿ ಪ್ರವೀಣ್ ಜತ್ತನ್ನ ಕಾರ್ಯಕ್ರಮ ನಿರೂಪಿಸಿದರು.