ಸೆ.3ಕ್ಕೆ ಉಡುಪಿ ಜಿಲ್ಲಾ ಪಾಣರ ಸಮಾಜದ ಸಮಾವೇಶ
ಉಡುಪಿ, ಆ.31: ಉಡುಪಿ ಜಿಲ್ಲಾ ಪಾಣರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಜಿಲ್ಲಾ ಪಾಣರ ಸಮಾಜದ ವಾರ್ಷಿಕೋತ್ಸವ ಹಾಗೂ ಸಮಾವೇಶ ಸೆ.3ರ ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಡಾ.ಪಾಂಡುರಂಗ ಎಸ್.ಪಡ್ಡಂ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗ್ಗೆ 10:00 ಗಂಟೆಗೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಸಚಿವ ಪ್ರಮೋದ ಮಧ್ವರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಅವರು ಲೋಗೋ ಅನಾವರಣಗೊಳಿಸಿದರೆ, ಚಿತ್ರನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಸಮಾಜದ ಹಿರಿಯರಿಗೆ ಗೌರವಾರ್ಪಣೆ ಮಾಡಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಕಡಿಯಾಳಿ ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ರಾಜಾಂಗಣಕ್ಕೆ ಆಗಮಿಸಲಾಗು ವುದು. ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವಿದೆ. ಸಾಧಕರಿಗೆ ಸನ್ಮಾನವಿದೆ. ಕೋವಿಡ್ ಸಮಯದಲ್ಲಿ ನಮ್ಮ ಸಮಾಜಕ್ಕೆ ನೆರವಿತ್ತ ದಾನಿಗಳಿಗೆ ಗೌರವಾ ರ್ಪಣೆ ಇದೆ ಎಂದು ಪಡ್ಡಂ ತಿಳಿಸಿದರು.
ಜಿಲ್ಲೆಯಲ್ಲಿ ಪಾಣರ ಯಾನೆ ನಲಿಕೆಯವರ ಜನಸಂಖ್ಯೆ ಸುಮಾರು 5000ವಿದ್ದು, ಸಮಾಜಕ್ಕಾಗಿ ಸಮುದಾಯ ಭವನ ನಿರ್ಮಾಣಕ್ಕೆ ಬಹುಕಾಲ ದಿಂದ ಪ್ರಯತ್ನ ನಡೆದಿದ್ದರೂ ಕಾರ್ಯಗತಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುಕೇಶ್ ಪಾಣ ಅಮ್ಮುಂಜೆ, ಉಪಾಧ್ಯ್ಕ್ಷಸುಧಾಕರ ಪಾಣ ಮೂಡುಬೆಳ್ಳೆ, ವಿಜಯ ತೋನ್ಸೆ, ರಮೇಶ್ ಕಾರ್ಕಳ ಮುಂತಾದವರಿದ್ದರು.