ಕಾಂಗ್ರೆಸ್ ಯಾವತ್ತೂ ವಿಶ್ವ ಶಾಂತಿಯ ಪರ: ಉಡುಪಿ ಜಿಲ್ಲಾ ಕಾಂಗ್ರೆಸ್
ಕಾರ್ಕಳ: ಕಾಶ್ಮೀರವಾಗಲಿ,ಫೆಲಸ್ತೀನ್ ಅಥವಾ ಅಫಘಾನಿಸ್ತಾನವೇ ಆಗಲಿ ಕಾಂಗ್ರೆಸ್ ಯಾವತ್ತೂಮಾನವ ಹಕ್ಕು ,ಸ್ವಾಯತ್ತತೆ ಮತ್ತು ಯಾವುದೇ ದೇಶವಾಸಿಗಳ ಗೌರವಯುತ ಬದುಕಿನ ಪ್ರತಿಪಾದನೆಯ ವಿಶ್ವಶಾಂತಿಯ ಪರವಾಗಿರುತ್ತದೆ ಎಂದು ಇತ್ತೀಚೆಗೆ ಕಾರ್ಕಳ ಶಾಸಕ ಮಾಜಿ ಸಚಿವ ಸುನೀಲ್ ಕುಮಾರ್ ನೀಡಿದ ಹೇಳಿಕೆಯೊಂದಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಇತಿಹಾಸ ಅರಿಯದವರಿಗೆ ವರ್ತಮಾನವು ಕೇವಲ ಕ್ರಾಂತಿಕಾರಿಯಾ ಗಿ ಕಾಣುತ್ತದೆ. ಫೆಲಸ್ತೀನ್ ಇಸ್ರೇಲ್ ಸಂಘರ್ಷ 60 ವರ್ಷಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಫೆಲಸ್ತೀನಿನ ಸ್ವಾಯತ್ತತೆ ಯೊಂದಿಗಿನ ಇಸ್ರೇಲಿನ ಸೌಹಾರ್ದಯುತ ರಾಜತಾಂತ್ರಿಕ ಸಂಬಂಧಕ್ಕಾಗಿ, ಗಾಂಧೀಜಿ ಪ್ರತಿಪಾದಿಸಿದ ಅಹಿಂಸಾ ತತ್ವ ಸಿದ್ಧಾಂತದಡಿ ತನ್ನ ಬದುಕನ್ನೆ ಪಣವಿಟ್ಟು ಹೋರಾಡಿದ ಪಿಎಲ್ಒ ನಾಯಕ ದಿ. ಯಾಸರ್ ಅರಾಫತ್ ಹೋರಾಟದ ಐತಿಹಾಸಿಕತೆಯ ನೈಜ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಕಾರ್ಯಕಾರಿಣಿ ಯಲ್ಲಿ ಫೆಲಸ್ತೀನಿಯನ್ನರ ಬದುಕಿನ ಕಷ್ಟಕಾಲದಲ್ಲಿ ನಾವಿದ್ದೇವೆ ಎಂದಿದೆ. ಅದರೊಂದಿಗೆ ಇಸ್ರೇಲ್ ಮೇಲೆ ಹಮಾಸ್ ಹೋರಾಟಗಾರರ ದಾಳಿಯನ್ನು ಸ್ಪಷ್ಟ ಶಬ್ದಗಳಿಂದ ಖಂಡಿಸಿದೆ. ಅಷ್ಟಕ್ಕೂ ಅರಬ್ ರಾಷ್ಟ್ರಗಳ ಮುನಿಸಿನ ಪ್ರತಿರೋಧದ ಹೊರತಾಗಿಯೂ ಇಸ್ರೇಲಿನೊಂದಿಗೆ ಭಾರತ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಿ ರಾಯಭಾರಿಗಳ ನೇಮಕಾತಿ ಮಾಡಿದ್ದೇ ಕಾಂಗ್ರೆಸ್ ಆಡಳಿತದಲ್ಲಿ. ಪ್ರಧಾನಿ ದಿ. ನರಸಿಂಹ ರಾವ್ ಅವಧಿಯಲ್ಲಿ ಎನ್ನುವುದು ಬಹುಶ ಬಿಜೆಪಿ ನಾಯಕರಿಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತಾವಧಿಯಲ್ಲಿ ದಿ. ಪ್ರಧಾನಿ ಜವಾಹರಲಾಲ್ ನೆಹರು ವಿಶ್ವ ರಾಜತಾಂತ್ರಿಕತೆಗೆ ಪರಿಚಯಿಸಿದ ಪಂಚಶೀಲ ತತ್ವ, ನಿರ್ಲಿಪ್ತ ಧೋರಣೆಯ ತಳಹದಿಯ ಮೇಲೆ ವಿಶ್ವದ ಶಾಂತಿ ಸೌಹಾರ್ಧತೆಗೆ ನೀಡಿದ ಕೊಡುಗೆ ಅಪಾರ. ವಿಶ್ವದ ಎದುರು ಉಗ್ರವಾದದ ವಿರುದ್ಧ ಮಾತಾಡುತ್ತಲೇ ಮನೆಯಲ್ಲಿ ಧರ್ಮದ ಬೇರು ಅಗೆದು ರಾಜಕೀಯ ಮಾಡುವ ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಉದಾರವಾದದ ಸೃಜನಶೀಲ ರಾಜನೀತಿ ಅರ್ಥ ಆಗಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಕಾರ್ಕಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ