ಮಲೆನಾಡು, ಕರಾವಳಿ ಜಿಲ್ಲೆಗಳ ಸಮಸ್ಯೆಗಳಿಗೆ ಪರಿಹಾರಕ್ಕೆ ಸೂತ್ರ ರೂಪಿಸಲು ಅ.31ರಂದು ಸಮಾಲೋಚನಾ ಸಭೆ: ಮರೊಳ್ಳಿ
ಉಡುಪಿ, ಅ.12: ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಹಾಸನ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಸಮಗ್ರವಾದ ಅಧ್ಯಯನ ಮಾಡಿ ಅವುಗಳಿಗೆ ಪರಿಹಾರ ಸೂತ್ರ ರೂಪಿಸುವ ನಿಟ್ಟಿನಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟವು ಕಾರ್ಯಪ್ರವೃತ್ತವಾಗಿದ್ದು, ಈ ನಿಟ್ಟಿನಲ್ಲಿ ಅ.31ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ವಿಜಯನಗರದ ಆದಿ ಚುಂಚನಗಿರಿ ಮಠದ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಉಡುಪಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮರೋಳ್ಳಿ, ಮುಂದಿನ ದಿನಗಳಲ್ಲಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲೂ ಸ್ಥಳೀಯ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಲು ಅನುಕೂಲವಾಗುವಂತೆ ಒಕ್ಕೂಟದ ಘಟಕಗಳನ್ನು ರಚಿಸಲಾಗುವುದು. ಅದೇ ರೀತಿ ಇನ್ನಷ್ಟು ಜಿಲ್ಲೆಗಳಿಗೆ ಸಂಘಟನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.
ಕರಾವಳಿ ಮಲೆನಾಡು ಪ್ರದೇಶದ ಪ್ರಮುಖ ಬೆಳೆಗಳಿಗೆ ಕಾಣಿಸಿಕೊಂಡಿರುವ ವಿವಿಧ ರೋಗಗಳು, ಕಂದಾಯ, ಅರಣ್ಯ ಭೂಮಿ, ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಲ್ಲಿ ಎದುರಾಗಿರುವ ತೊಡಕುಗಳು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಎದುರಾಗುವ ಲಾಭ ನಷ್ಟ ಕಷ್ಟ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಒಕ್ಕೂಟ ವಿಸ್ತೃತ ಚರ್ಚೆ ನಡೆಸಲು ತೀರ್ಮಾನಿಸಿದೆ. ಮಲೆನಾಡು- ಕರಾವಳಿ ಭಾಗದಲ್ಲಿ ಮೆಡಿಕಲ್ ಕಾಲೇಜು, ಐಐಟಿ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣಕ್ಕೆ ನೆರವಾಗುವ ಯೋಜನೆ ರೂಪಿಸಲು ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶ ಒಕ್ಕೂಟದ ಮುಂದಿದೆ ಎಂದು ಅವರು ಹೇಳಿದರು.
ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಆಳುವ ಸರಕಾರಗಳ ಗಮನ ಸೆಳೆಯುವಂತಹ ಪರಿಣಾಮಕಾರಿ ಹೋರಾಟಗಳನ್ನು ರೂಪಿಸುವುದು ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ರೈತರ ಕೃಷಿ ಬೆಳೆಗಳಿಗೆ ಮಾರಕ ರೋಗಗಳ ನಿರ್ಮೂಲನೆಗೆ ಸರಕಾರ ವಿಶೇಷ ಕಾಳಜಿ ವಹಿಸಿ, ತುರ್ತು ಕ್ರಮ ವಹಿಸುವ ಮೂಲಕ ಅಡಿಕೆಗೆ ತಗುಲಿರುವ ಎಲೆಚುಕ್ಕೆ ರೋಗದ ವೈಜ್ಞಾನಿಕ ಸಂಶೋಧನೆ ನಡೆಸಿ, ಪರಿಹಾರ ಕಲ್ಪಿಸಬೇಕು. ಮಲೆನಾಡು, ಕರಾವಳಿ ಭಾಗದಲ್ಲಿ ಭೂಮಿ ಹಕ್ಕು ನೀಡುವಲ್ಲಿನ ಮತ್ತು ದರಖಾಸ್ತು ಮಂಜೂರಾತಿಗೆ ಸರಕಾರ ಕಂದಾಯ ಇಲಾಖೆ ಮೂಲಕ ತುರ್ತು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಸಂಚಾಲಕ ಅನಿಲ್ ಹೊಸಕೊಪ್ಪ, ವಿಜಯ ಶೆಟ್ಟಿ, ಸಂದೇಶ್ ಕೃಷ್ಣ, ದುರ್ಗಾ ಚರಣ್, ದೀಪಕ್, ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
ನಾರಾಯಣ ಗುರು ವಿವಿ ಸ್ಥಾಪನೆಗೆ ಒತ್ರಾಯ
ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಂಡಳಿ, ಕುಂದ ಕನ್ನಡ ಸಾಹಿತ್ಯ ಅಕಾಡಮಿ ಹಾಗೂ ಸಾಮಾಜಿಕ ಸಮಾನತೆಯ ಹರಿಕಾರ ನಾರಾಯಣ ಗುರುಗಳ ಹೆಸರಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಬೇಕು ಎಂಬ ಹಕ್ಕೊತ್ತಾಯವನ್ನು ಒಕ್ಕೂಟ ಮಂಡಿಸಲಿದೆ ಎಂದು ಸುಧೀರ್ ಕುಮಾರ್ ಮರೋಳ್ಳಿ ತಿಳಿಸಿದರು.
ಅಡಿಕೆ ಕೃಷಿಯಲ್ಲಿನ ಸಮಗ್ರ ಸಮಸ್ಯೆ ನಿವಾರಣೆ, ಮೀನುಗಾರಿಕೆಗೆ ಆಧುನಿಕ ಸ್ವರ್ಶ, ಮೀನುಗಾರರ ಮಕ್ಕಳಿಗೆ ರಾಜ್ಯ, ಕೇಂದ್ರೀಯ ಶಿಕ್ಷಣ ವ್ಯವಸ್ಥೆ, ಸಮುದ್ರ ಕೊರೆತಕ್ಕೆ ಶಾಶ್ವತವಾದ ಪರಿಹಾರ, ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶದ ರಕ್ಷಣೆ ಮತ್ತು ಸರ್ವಧರ್ಮ ಸಮಭಾವಕ್ಕೆ ಒತ್ತು, ಹೈಕೋರ್ಟ್ ಸಂಚಾರಿ ಪೀಠಕ್ಕೆ ಒತ್ತಾಯ ಮಾಡಲಾಗುವುದು ಎಂದರು.