ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಮಳೆ: ಹಲವು ಮನೆಗಳಿಗೆ ಹಾನಿ
ಸಾಂದರ್ಭಿಕ ಚಿತ್ರ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ರವಿವಾರ ಕೂಡ ಭಾರೀ ಮಳೆ ಮುಂದುವರೆದಿದ್ದು, ಇದರಿಂದ 10 ಮನೆಗಳಿಗೆ ಹಾನಿಯಾಗಿ ಸುಮಾರು 3.84ಲಕ್ಷ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 68.9ಮಿ.ಮೀ. ಸರಾಸರಿ ಮಳೆಯಾಗಿದೆ. ಕಾರ್ಕಳ- 37.8ಮಿ.ಮೀ., ಕುಂದಾಪುರ- 97.6 ಮಿ.ಮೀ., ಉಡುಪಿ- 35.2ಮಿ.ಮೀ., ಬೈಂದೂರು- 102.3ಮಿ.ಮೀ., ಬ್ರಹ್ಮಾವರ- 56.6ಮಿ.ಮೀ., ಕಾಪು- 37.6ಮಿ.ಮೀ., ಹೆಬ್ರಿ- 70.6 ಮಿ.ಮೀ. ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕುಂದಾಪುರ ತಾಲೂಕಿನ ಕಮಲಶಿಲೆ ಲಕ್ಷ್ಮೀ ಕುಂದರ್ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ತೀವ್ರ ಹಾನಿಯಾಗಿ 1,50,000ರೂ., ಬೆಳ್ಳಾಲ ನಂದ್ರೊಳ್ಳಿ ಅಕ್ಕಯ್ಯ ಅವರ ಮನೆಯ ಗೋಡೆ ಕುಸಿದು 20,000ರೂ., ಗುಜ್ಜಾಡಿ ಕಂಚಗೋಡು ಗ್ರಾಮದ ವಲೇರಿಯನ್ ಡಯಾಸ್ ಎಂಬವರ ದನದ ಕೊಟ್ಟಿಗೆ ಮೇಲೆ ತೆಂಗಿನ ಮರ ಬಿದ್ದು 10,000ರೂ., ಜಪ್ತಿ ಕೆರೆಬೆಟ್ಟುವಿನ ಮೀನಾ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ 35,000ರೂ. ನಷ್ಟ ಉಂಟಾಗಿದೆ.
ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಶೇಷಿ ದೇವಾಡಿಗ ಮನೆ ಮಳೆ ಯಿಂದ ಭಾಗಶಃ ಹಾನಿಯಾಗಿ 34,000ರೂ. ನಷ್ಟವಾಗಿದೆ. ಭಾರೀ ಗಾಳಿ ಮಳೆಯಿಂದ ಉಡುಪಿ ತಾಲೂಕಿನ ಮೂಡು ತೋನ್ಸೆಯ ಸುಶೀಲ ಪೂಜಾರ್ತಿ, ಶಿವಳ್ಳಿ ಗ್ರಾಮದ ಬಾಲಚಂದ್ರ ಪೂಜಾರಿ, ಅಂಜಾರು ಗ್ರಾಮದ ನೀತ ಶೆಟ್ಟಿ, ಪುತ್ತೂರು ಗ್ರಾಮದ ನಾರಾಯಣ, ಅಲೆವೂರು ನೈಲಪಾದೆಯ ಜಲಜ ಮಡಿವಾಳ್ತಿ ಅವರ ಮನೆಗಳಿಗೆ ಹಾನಿಯಾಗಿ ಒಟ್ಟು 1.35ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.