ಸಾಲಮನ್ನಾ ಯೋಜನೆಯಲ್ಲಿ ಭ್ರಷ್ಟಾಚಾರ: ನವೀನ್ ಚಂದ್ರ ಉಪ್ಪುಂದ ಆರೋಪ
ಉಡುಪಿ, ಆ.9: ರಾಜ್ಯ ಸರಕಾರ 2018-19ರಲ್ಲಿ ಮಾಡಿದ ಮೀನುಗಾರರ ಸಾಲಮನ್ನಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ನವೀನ ಚಂದ್ರ ಉಪ್ಪುಂದ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಮತ್ತು ಕುಂದಾಪುರ ವ್ಯಾಪ್ತಿಯ ಯೂನಿಯನ್ ಬ್ಯಾಂಕ್ ಕೊಲ್ಲೂರು ಮತ್ತು ಕುಂದಾಪುರ ಶಾಖೆಯ ಮ್ಯಾನೇಜರ್ ಇದರಲ್ಲಿ ಶಾಮೀಲಾಗಿ ಸ್ಥಳೀಯ ಮೀನುಗಾರರಿಗೆ ಸಂಬಂಧಪಡದ ಸಹಕಾರ ಸಂಘಗಳು, ಟ್ರಸ್ಟ್‌ಗಳು ಸೇರಿ 2.41 ಕೋ.ರೂ.ಗಳಷ್ಟು ಹಣವನ್ನು ಸುಳ್ಳುದಾಖಲೆ ನೀಡಿ ವಂಚಿಸಿದ್ದಾರೆ ಎಂದು ದೂರಿದರು.
ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿದ್ದು, ಅದರಂತೆ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.